

ಕುಣಿಗಲ್: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಲಿಂಕ್ ಕೆನಾಲ್ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಶಾಸಕ ಡಾ.ಎಚ್.ಡಿ.ರಂಗನಾಥ್ ತಿಳಿಸಿದರು.
ಮೂಡಲ್ ಕುಣಿಗಲ್ ದೊಡ್ಡಕೆರೆ ಕೋಡಿ ಹರಿದ ಹಿನ್ನೆಲೆಯಲ್ಲಿ ಪುರಸಭೆ ಹಮ್ಮಿಕೊಂಡಿದ್ದ ಗಂಗಾರತಿ, ಬಾಗಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಗಂಗಾರತಿ ಹಾಗೂ ಬಾಗಿನ ಅರ್ಪಿಸಿ ನಂತರ ಮಾತನಾಡಿ, ತಾಲೂಕಿನ ಲಿಂಕ್ ಕೆನಾಲ್ ಕಾಮಗಾರಿಗೆ ಕೆಲವರು ಅಡ್ಡಿ ಪಡಿಸಿದ್ದರಿಂದ ಸರ್ಕಾರ ತಾಂತ್ರಿಕ ಸಮಿತಿ ರಚಿಸಿತ್ತು, ಈ ಸಮಿತಿ ವರದಿ ನೀಡಿದ ಬಳಿಕ ಕಾಮಗಾರಿ ಆರಂಭಿಸಿದ್ದಾಗ ಜನಪ್ರತಿನಿಧಿಗಳು ಹಾಗೂ ರೈತರು ಹೋರಾಟ ಮಾಡಿ ಕೆನಾಲ್ ಕಾಮಗಾರಿ ತಡೆದಿದ್ದರು. ಈ ಸಂಬಂಧ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣ ಹಾಗೂ ಜನಪ್ರತಿನಿಧಿಗಳು ಭಾಗವಹಿಸಿ ಚರ್ಚಿಸಲಾಗಿತ್ತು. ಈಗ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸ್ಥಳ ಪರಿಶೀಲನೆ ಮಾಡಿ ಕಾಮಗಾರಿ ಆರಂಭಿಸುವಂತೆ ತಿಳಿಸಿದ್ದರಿಂದ ಶ್ರೀ ಕೆಲಸ ಆರಂಭವಾಗಲಿದೆ ಎಂದರು.
ಕೆರೆಗೆ ಅಲಂಕಾರ:
ಮಂಗಳವಾರ ದೊಡ್ಡಕೆರೆ ಕೋಡಿಯನ್ನು ಬಾಳೆ ಕಂದು, ಹಸಿರು ತಳಿರು ತೊರಣ ಹಾಗೂ ಹೂಗಳಿಂದ ಸಿಂಗರಿಸಲಾಗಿತ್ತು. ಕೋಡಿಯ ಅಂಗಳದಲ್ಲಿ ಮೂಡಲ್ ಕುಣಿಗಲ್ ಕೆರೆ, ನೋಡೋರ್ಗೊಂದೈ, ಮೂಡಿ ರ್ಬತಾನೆ ಚಂದಿರಾಮ ಜನಪದ ಗೀತೆ ಹಾಗೂ ಭರತ ನಾಟ್ಯದ ಜೈಕಾರ ಮೊಳಗಿತ್ತು. ಪೂರ್ಣಕುಂಭ ಹೊತ್ತ ನೂರಾರು ಮಹಿಳೆಯರು, ವಾದ್ಯಗೋಷ್ಠಿಗಳೊಂದಿಗೆ ಶಾಸಕ ರಂಗನಾಥ್ ಮತ್ತು ಜನಪ್ರತಿನಿಧಿಗಳನ್ನು ವೇದಿಕೆಗೆ ಕರೆ ತರಲಾಯಿತು.
ಕೆರೆಯ ಕೋಡಿ ಅಂಗಳದಲ್ಲಿ ಆಯೋಜಿಸಿದ್ದ ಪೂಜಾ ಕೈಕರ್ಯಗಳನ್ನು ವಿದ್ವಾನ್ ವೈ.ಎಸ್.ಕುಮಾರಸ್ವಾಮಿ ನೆರವೇರಿಸಿದರು. ಬಳಿಕ ಶಾಸಕ ಡಾ.ಎಚ್.ಡಿ.ರಂಗನಾಥ್, ಪುರಸಭೆ ಅಧ್ಯಕ್ಷೆ ಎಸ್.ಮಂಜುಳನಾಗರಾಜು, ತಹಸೀಲ್ದಾರ್ ಯು.ರಶ್ಮಿ, ನೂರಾರು ನಾಗರಿಕರ ಸಮ್ಮುಖದಲ್ಲಿ ಗಂಗಾರತಿ ಮಾಡಿ ಬಳಿಕ ಬಾಗಿನ ಅರ್ಪಿಸಿದರು.
ಹೇಮಾವತಿ ಎಇಇ ರವಿ, ಪುರಸಭೆ ಉಪಾಧ್ಯಕ್ಷ ಮಲ್ಲಿಪಾಳ್ಯ ಶ್ರೀನಿವಾಸ್, ಮುಖ್ಯಾಧಿಕಾರಿ ಕೃಷ್ಣ, ಸದಸ್ಯರಾದ ರಂಗಸ್ವಾಮಿ, ಜಯಲಕ್ಷಿ$್ಮ, ಮಂಜುಳರಂಗಪ್ಪ, ದೇವರಾಜು, ರೂಪಿಣಿ, ಶಿವಕುಮಾರ್, ಮಾಜಿ ಸದಸ್ಯ ಶಂಕರ್, ಪಾಪಣ್ಣ, ಮುಖಂಡ ಸುಂದರಕುಪ್ಪೆಪಾಪಣ್ಣ ಮತ್ತಿತರರು ಇದ್ದರು,
ಅಚ್ಚುಕಟ್ಟಿಗೆ ನೀರು : ಈ ಹಿಂದೆ ರಸ್ತೆ ಕಾಮಗಾರಿ ಮಾಡುವ ವೇಳೆಯಲ್ಲಿ ಕೆಲ ವ್ಯಕ್ತಿಗಳು ಅಚ್ಚುಕಟ್ಟು ಪ್ರದೇಶಕ್ಕೆ ನೀರು ಪೂರೈಸುವ ದೊಡ್ಡಕೆರೆಯ ತೂಬಿಗೆ ಸಿಮೆಂಟ್ ಚೀಲಾ ಹಾಕಿ ತೂಬನ್ನು ಹಾಳು ಮಾಡಿ ನೀರು ಹರಿಯದಂತೆ ಮಾಡಿದ್ದಾರೆ. ತೂಬು ಹಾಳು ಮಾಡಿರುವ ವ್ಯಕ್ತಿಗಳೇ ತೂಬಿನ ಹೆಸರಿನಲ್ಲಿ ರಾಜಕಾರಣ ಮಾಡಲು ಹೊರಟ್ಟಿದ್ದಾರೆ. ಆದರೆ ನಾನು ರಾಜಕಾರಣ ಮಾಡುವುದಿಲ್ಲ, ತೂಬು ದುರಸ್ತಿ ಮಾಡುವ ಸಂಬಂಧ ಟೆಕ್ನಿಕಲ್ ಕಮಿಟಿಯಿಂದ ಸ್ಥಳ ಪರಿಶೀಲನೆ ಮಾಡಿಸಿದ್ದೇನೆ. ನೀರು ತುಂಬಿರುವುದರಿಂದ ದುರಸ್ತಿ ಮಾಡಲು ಆಗುವುದಿಲ್ಲ. ನೀರು ಕಡಿಮೆ ಆದ ಬಳಿಕ ಸರಿಪಡಿಸುವುದಾಗಿ ಟೆಕ್ನಿಕಲ್ ಕಮಿಟಿ ತಿಳಿಸಿದೆ ಎಂದು ಶಾಸಕರು ತಿಳಿಸಿದರು.