

ಪಾಂಡವಪುರ: ವಿಶ್ವೇಶ್ವರಯ್ಯ ನಾಲೆಗೆ ನೀರು ಹರಿಸಿದ ಒಂದು ದಿನದ ಅಂತರದಲ್ಲಿ ಏರಿಯ ಲೈನಿಂಗ್ ಗುರುವಾರ ರಾತ್ರಿ ಕುಸಿದು ಬಿದ್ದಿದೆ.
ಪಟ್ಟಣದ ಬಾಲಕಿಯರ ಕಾಲೇಜು ಹಿಂಭಾಗದಲ್ಲಿನ ನಾಲೆ ಏರಿಗೆ ಹಾಕಲಾಗಿದ್ದ ಲೈನಿಂಗ್ ಸಿಮೆಂಟ್ ಗಾರೆ ನೀರಿನ ರಭಸಕ್ಕೆ ಕುಸಿದಿದೆ. ವಿಶ್ವೇಶ್ವರಯ್ಯ ನಾಲೆ ಆಧುನೀಕರಣ ಕಾಮಗಾರಿ ಕಳಪೆ ಎಂಬ ಆರೋಪಗಳ ಬೆನ್ನಲ್ಲೇ ಇದೀಗ ಒಂದೇ ದಿನ ಹರಿದ ನೀರಿಗೆ ಈ ವ್ಯವಸ್ಥೆಯಾದರೆ ಮುಂದಿನ ದಿನಗಳಲ್ಲಿ ನಾಲೆಯ ದುಸ್ಥಿತಿ ಯಾವ ಮಟ್ಟಕ್ಕೆ ತಲುಪಲಿದೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಜತೆಗೆ ನಾಲೆ ಕಾಮಗಾರಿ ಅಪೂರ್ಣಗೊಂಡಿದ್ದು, ಕಾಮಗಾರಿಗಾಗಿ ಜೆಸಿಬಿ ಮತ್ತು ಹಿಟಾಚಿ ಬಳಸಿದ್ದರಿಂದ ಏರಿಯ ಇಕ್ಕೆಲಗಳ ಮಣ್ಣು ಸಡಿಲಗೊಳಿಸಲಾಗಿದೆ. ನಾಲೆಯಲ್ಲಿ ನೀರಿನ ರಭಸಕ್ಕೆ ಮಣ್ಣು ಕೊಚ್ಚಿಕೊಂಡು ಹೋಗಿದೆ. ಹೊಸದಾಗಿ ನಿರ್ಮಿಸಿರುವ ನಾಲೆಯ ಏರಿಯ ತಡೆಗೋಡೆಯ ಸಿಮೆಂಟ್ ಗಾರೆ ಕುಸಿತವಾಗಿರುವುದು ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿಯಾಗಿದೆ. ಗುತ್ತಿಗೆದಾರರು ಕಾಮಗಾರಿ ಗುಣಮಟ್ಟ ಕಾಯ್ದುಕೊಂಡಿಲ್ಲ. ಇದನ್ನು ಪ್ರಶ್ನಿಸಬೇಕಾದ ಅಧಿಕಾರಿಗಳು ಕೈಕಟ್ಟಿ ಕುಳಿತ್ತಿದ್ದಾರೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.
397 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ನಡೆಯುತ್ತಿರುವ ವಿ ನಾಲೆ ಕಾಮಗಾರಿ ಗುಣಮಟ್ಟ ಕಳಪೆಯಿಂದ ಕೂಡಿದೆ ಎಂದು ಸಾಕಷ್ಟು ಆರೋಪಗಳು ಈ ಹಿಂದೆಯೂ ಕೇಳಿಬಂದಿತ್ತು. ನಾಲೆಗೆ ನೀರು ಹರಿದ ಬಳಿಕ ಕಾಮಗಾರಿ ಗುಣಮಟ್ಟ ತಿಳಿಯಲಿದೆ ಎಂದು ಬಿಜೆಪಿ, ಜೆಡಿಎಸ್, ರೈತಸಂಘ ಸೇರಿದಂತೆ ಹಲವಾರು ಸಂಘಟನೆಗಳು ಆರೋಪಿಸಿದ್ದವು. ಅದರಂತೆ ನಾಲೆಗೆ ನೀರು ಹರಿಸಿದ ಒಂದೇ ದಿನದಲ್ಲೇ ಪಟ್ಟಣದಲ್ಲಿ ವಿಸಿ ನಾಲೆಯ ಏರಿ ನೀರಿನ ರಭಸಕ್ಕೆ ಕುಸಿದಿದ್ದು, ಸಾರ್ವಜನಿಕರು ಮಾಡಿದ ಆರೋಪಕ್ಕೆ ಹಿಡಿದ ಕೈಗನ್ನಡಿಯಾಗಿದೆ.