ಗಡಿನಾಡು ಶಾಲೆಗಳಲ್ಲಿ ಭಾಷಾ ಕಿರುಕುಳ! : ಐಚ್ಛಿಕ ಮಲಯಾಳ ತರಗತಿಯಿಂದ ಗೊಂದಲ : ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ತೊಂದರೆ

06
Published on

ವಿಜಯವಾಣಿ ಸುದ್ದಿಜಾಲ ಕುಂಬಳೆ

ನ್ಯಾಯಾಲಯ ಹಾಗೂ ರಾಷ್ಟ್ರಪತಿಗಳ ಆದೇಶಗಳನ್ನೂ ಧಿಕ್ಕರಿಸಿ ಗಡಿನಾಡು ಕಾಸರಗೋಡಿನಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಭಾಷೆ ಹೆಸರಿನಲ್ಲಿ ಕಿರುಕುಳ ಹೆಚ್ಚುತ್ತಿದ್ದು, ಕರ್ನಾಟಕ ಸಹಿತ ಕಾಸರಗೋಡಿನಲ್ಲಿರುವ ಕನ್ನಡಿಗರನ್ನು ಕೆರಳಿಸಿದೆ.

ಕಳೆದ ಶೈಕ್ಷಣಿಕ ವರ್ಷ ಕೇರಳ ಸರ್ಕಾರ ಕಡ್ಡಾಯವೆಂದೂ ೋಷಿಸದಿದ್ದರೂ ಐಚ್ಛಿಕ ವಿಷಯವಾಗಿ ಕನ್ನಡ ಮಾಧ್ಯಮದ 1ರಿಂದ 4ನೇ ತರಗತಿ ವಿದ್ಯಾರ್ಥಿಗಳಿಗೆ ಮಲಯಾಳಂ ಕಲಿಸಲು ಆರಂಭಿಸಿತ್ತು. ಆದರೆ ಕನ್ನಡ ವಿಷಯಕ್ಕೆ ಕನ್ನಡ ಭಾಷೆ ತಿಳಿಯದ ದಿನವೇತನ ಶಿಕ್ಷಕರ ನೇಮಿಸಿ ಕೇರಳ ಸರ್ಕಾರ ಪೇಚಿಗೆ ಸಿಲುಕಿದ್ದು, ಪ್ರಸಕ್ತ ವರ್ಷವೂ ಅದೇ ಗೋಳು ಮುಂದುವರಿದಿದೆ.

ನಿತ್ಯವೂ ಎಂಟು ಅವಧಿಗಳಲ್ಲಿ ನಿಗದಿತ ಪಠ್ಯ ಬೋಧಿಸಲಾಗುತ್ತಿದ್ದು, ಮಲಯಾಳಂ ಭಾಷೆ ಕಲಿಕೆಗಾಗಿ ಹೆಚ್ಚುವರಿ ತರಗತಿ ನಿಗದಿಪಡಿಸಿಲ್ಲ. ಮಲಯಾಳಂ ಭಾಷೆಯನ್ನು ಐಚ್ಛಿಕಗೊಳಿಸಿದ್ದರಿಂದ ವಿದ್ಯಾರ್ಥಿಗಳಲ್ಲೂ ಗೊಂದಲ ಮೂಡಿಸಿದೆ. ಮಲಯಾಳಂ ಆಯ್ದುಕೊಂಡ ವಿದ್ಯಾರ್ಥಿಗಳಿಗೆ ಕಡ್ಡಾಯ ಹಾಜರಾತಿ, ಪರೀಕ್ಷೆಗಳು ಇಲ್ಲ. ಜತೆಗೆ ಪೂರ್ಣಾವಧಿ ಶಿಕ್ಷಕರ ಕೊರತೆಯೂ ಇದ್ದು, ಐಚ್ಛಿಕ ತರಗತಿ ಸಮಯ ವ್ಯರ್ಥ ಎಂಬುದು ಪಾಲಕರ ಅಭಿಪ್ರಾಯ.

ವಾರಕ್ಕೆ ಮೂರು ಅವಧಿ?

ಐಚ್ಛಿಕ ಮಲಯಾಳಂ ಆಯ್ದುಕೊಂಡ ವಿದ್ಯಾರ್ಥಿಗಳಿಗೆ ವಾರದಲ್ಲಿ ಕನಿಷ್ಠ 3 ಅವಧಿ ಬೋಧನೆ ನಡೆಯಬೇಕು ಎಂಬುದು ನಿಯಮ. ವಾರದಲ್ಲಿ ಮೂರರಂತೆ ತಿಂಗಳಿಗೆ 12 ಅವಧಿ ವಿದ್ಯಾರ್ಥಿಗಳಿಗೆ ನಷ್ಟವಾಗುತ್ತಿದ್ದು, ಶಿಕ್ಷಣ ಇಲಾಖೆಯ ಅಸಮರ್ಪಕ ನಿಯಮಗಳಿಂದ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಮಾರಕ ಪರಿಣಾಮ ಬೀರುವ ಅಪಾಯವಿದೆ.

ತೊಂದರೆ ಎದುರಿಸುತ್ತಿರುವ ಶಾಲೆಗಳು

ಮಂಜೇಶ್ವರ ತಾಲೂಕಿನ ವರ್ಕಾಡಿ, ಪೈವಳಿಕೆ, ಎಣ್ಮಕಜೆ, ಕಾಸರಗೋಡು ತಾಲೂಕಿನ ದೇಲಂಪಾಡಿ, ಬೆಳ್ಳೂರು, ಬದಿಯಡ್ಕ, ಕುಂಬ್ಡಾಜೆ, ಬೆಳ್ಳೂರು, ಮಧೂರು ಶಾಲೆಗಳಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಬಹುಸಂಖ್ಯಾತರಾಗಿದ್ದು, ಕೇರಳ ಸರ್ಕಾರದ ನಿರ್ಧಾರದಿಂದ ತೊಂದರೆಗೆ ಒಳಗಾಗಿದ್ದಾರೆ.

ರಾಷ್ಟ್ರಪತಿ ಆದೇಶಕ್ಕೂ ಕ್ಯಾರಿಲ್ಲ

ಕೇರಳ ವಿಧಾನಸಭೆ ಅಂಗೀಕರಿಸಿದ್ದ ಮಲಯಾಳ ಭಾಷಾ ಮಸೂದೆಗೆ ಅಂಕಿತ ಹಾಕಲು ರಾಷ್ಟ್ರಪತಿಗಳು ಇತ್ತೀಚೆಗೆ ನಿರಾಕರಿಸಿದ್ದರು. ಸರ್ಕಾರಿ ವ್ಯವಹಾರಗಳನ್ನು ಸಂಪೂರ್ಣವಾಗಿ ಮಲಯಾಳಂ ಮಾಡುವುದರಿಂದ ರಾಜ್ಯದ ಭಾಷಾ ಅಲ್ಪಸಂಖ್ಯಾತರ ಹಕ್ಕುಗಳ ಕಸಿದಂತಾಗುತ್ತದೆ ಎಂದು ಅಭಿಪ್ರಾಯ ತಿಳಿಸಿದೆ.

ಕನ್ನಡ ಶಾಲೆಗಳಲ್ಲಿ ಮಲಯಾಳ ಕಲಿಕೆಗಾಗಿ ವಾರಕ್ಕೆ ಒಂದು ದಿನ ತರಗತಿ ನಿಗದಿಪಡಿಸಿ ಶಿಕ್ಷಕರ ನೇಮಕ ನಡೆಯುತ್ತಿತ್ತು. ಪ್ರಸ್ತುತ ವಾರದಲ್ಲಿ ಎರಡಿಂದ ಮೂರು ಶಾಲೆಗಳಲ್ಲಿ ಮಲಯಾಳ ವಿಷಯ ಬೋಧನೆಗೆ ಆದೇಶ ಬಂದಿದ್ದು, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ತೊಡಕಾಗಿದೆ. ವಿದ್ಯಾರ್ಥಿಗಳ ಹಕ್ಕನ್ನು ಕೇರಳ ಸರ್ಕಾರ ಬಲವಂತದಿಂದ ಕಸಿದುಕೊಳ್ಳುತ್ತಿದೆ. ಪ್ರದೀಪ್ ಕುಮಾರ್ ಶೆಟ್ಟಿ ಡಿ.ಬಿ, ಪ್ರಧಾನ ಕಾರ್ಯದರ್ಶಿ , ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಟನೆ (ರಿ) ಕಾಸರಗೋಡು.

  • ಮುಂದುವರಿದ ಕನ್ನಡ ಭಾಷಾ ಶಿಕ್ಷಕರ ಕೊರತೆ
  • ಐಚ್ಛಿಕದಿಂದ ವಿದ್ಯಾರ್ಥಿಗಳಲ್ಲಿ ಗೊಂದಲ
  • ಮಲಯಾಳ ಕಲಿಯುವವರಿಗಿಲ್ಲ ಹಾಜರಿ, ಪರೀಕ್ಷೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net