

ಚಿಕ್ಕೋಡಿ/ಬೋರಗಾಂವ: ರಾಜ್ಯದಲ್ಲಿ ಕನ್ನಡಿಗರು ಮತ್ತು ಮರಾಠಿಗರು ಅನ್ಯೋನ್ಯವಾಗಿದ್ದು, ಖಾನಾಪುರದಿಂದ ನಿಪ್ಪಾಣಿವರೆಗೆ ಸಹಬಾಳ್ವೆಯಿಂದ ಜೀವನ ಮಾಡುತ್ತಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ತಾಲೂಕಿನ ಕಾರದಗಾ ಗ್ರಾಮದಲ್ಲಿ ಕನ್ನಡ ಬಳಗದಿಂದ ಭಾನುವಾರ ಆಯೋಜಿಸಿದ್ದ 6ನೇ ಕನ್ನಡ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕಾರದಗಾ ಗ್ರಾಮ ಹಿಂದು, ಮುಸ್ಲಿಂ ಜನರು ಭಾವೈಕ್ಯ ಹಾಗೂ ಕನ್ನಡ ಮತ್ತು ಮರಾಠಿ ಭಾಷಾ ಬಾಂಧವ್ಯದ ಪ್ರತೀಕವಾಗಿದೆ. ಸತತ 6 ವರ್ಷಗಳಿಂದ ಗಡಿ ಭಾಗದ ಕಾರದಗಾದಲ್ಲಿ ಕನ್ನಡ ಸಮಾವೇಶ ಆಯೋಜಿಸಿರುವ ಕನ್ನಡ ಬಳಗದ ಕಾರ್ಯ ಶ್ಲಾಘನೀಯ ಎಂದರು.
ಸರ್ವಾಧ್ಯಕ್ಷ ಸರಜೂ ಕಾಟ್ಕರ್ ಮಾತನಾಡಿ, ಜಾಗತೀಕರಣ, ಭಯೋತ್ಪಾದನೆ, ಆರ್ಥಿಕ ಹಿಂಜರಿತ, ಕೋಮು ಗಲಭೆಯಂತಹ ಸನ್ನಿವೇಶಗಳು ಕಾಡುತ್ತಿವೆ. ಇಂತಹ ಸಂದಿಗ್ಧ ಕಾಲದಲ್ಲಿ ಸಾಹಿತಿ, ಕಲಾವಿದ, ಲೇಖಕರು ಮತ್ತು ಪತ್ರಕರ್ತರ ಮೇಲೆ ಬಹು ದೊಡ್ಡ ಜವಾಬ್ದಾರಿ ಇದೆ. ಈ ಜವಾಬ್ದಾರಿಯಿಂದ ಹಿಂದೆ ಸರಿದರೆ ಜಗತ್ತಿನ ಯಾವ ಇತಿಹಾಸವೂ ಅವರನ್ನು ಕ್ಷಮಿಸಲಾರದು ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಚಿಕ್ಕೋಡಿಯ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ ಮಾತನಾಡಿ, ಚಿಂಚಣಿಯ ಅಲ್ಲಮಪ್ರಭು ಸ್ವಾಮೀಜಿ ಹಾಕಿ ಕೊಟ್ಟ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕು ಎಂದರು. ಕನ್ನಡ ಬಳಗದ ಗೌರವಾಧ್ಯಕ್ಷ ರಾಜು ಖಿಚಡೆ ಮಾತನಾಡಿದರು. ಗ್ರಾಮದಲ್ಲಿ ಸರ್ವಾಧ್ಯಕ್ಷ ಸರಜೂ ಕಾಟ್ಕರ್ ದಂಪತಿ ಮೆರವಣಿಗೆ ಮಾಡಲಾಯಿತು. ಡೊಳ್ಳು ಕುಣಿತ, ಕುದುರೆ ಕುಣಿತ, ಝಾಂಜ್ ಪಥಕ್, ವಿದ್ಯಾರ್ಥಿಗಳ ನೃತ್ಯ, ರೂಪಕಗಳ ಪ್ರದರ್ಶನ ಕಣ್ಮನ ಸೆಳೆಯಿತು. ಚಿಂಚಣಿ ಸಿದ್ಧ ಸಂಸ್ಥಾನ ಮಠದ ಅಲ್ಲಮಪ್ರಭು ಸ್ವಾಮೀಜಿ ಅಗಲಿಕೆ ಹಿನ್ನೆಲೆಯಲ್ಲಿ ಮೌನಾಚರಣೆ ಮಾಡಲಾಯಿತು. ಅಲ್ಲಮಪ್ರಭು ಸ್ವಾಮೀಜಿ ಸ್ಮರಣಿಕೆ ಹಾಗೂ ಕಬ್ಬಿಗನೆದೆಯ ಕಾವ್ಯ ಪುಸ್ತಕಗಳನ್ನು ಗಣ್ಯರು ಬಿಡುಗಡೆಗೊಳಿಸಿದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಡೋಣೆವಾಡಿ ಮಠದ ಸಾಧನಾನಂದ ಮಹಾರಾಜರು, ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ, ಸುಭಾಷ್ ಜೋಶಿ, ರಾಜು ವಡ್ಡರ, ಪ್ರಾಚಾರ್ಯ ಎಂ.ಕೆ.ಶಾಂತಲಾ, ಸುಜಾತಾ ವಡ್ಡರ, ವಿನಯಶ್ರೀ ಪಾಟೀಲ, ಪಂಕಜ ಪಾಟೀಲ, ಕುಭೇರ ಅವಟೆ, ರಾಜು ಪವಾರ, ಸುಮಿತ್ರಾ ಉಗಳೆ, ಡಾ. ಸುಬ್ರಾವ ಎಂಟೆತ್ತಿನವರ, ಡಾ. ರಾಮಕೃಷ್ಣ ಮರಾಠ, ಎಸ್.ವೈ. ಹಂಜಿ, ಬಾಬುರಾವ್ ನಡೋಣಿ, ಡಾ.ಪಿ.ಜಿ.ಕೆಂಪಣ್ಣವರ, ಲಲಿತಾ ಹಿರೇಮಠ, ಡಾ. ವಿಜಯ ಧಾರವಾಡ, ಶ್ರೀಪಾದ ಕುಂಬಾರ, ಡಾ.ಹೊಂಬಯ್ಯ ಹೊನ್ನಲಗೆರೆ, ಸಂಜಯ ಗಾವಡೆ, ಬಾಳು ನವನಾಳೆ, ಶಕುಂತಲಾ ಕಮತೆ, ಮಾಣಿಕ ಚಂದಗಡೆ, ಕಿರಣ ಸದಲಗೆ, ಎಂ.ಎನ್. ಬಳಗಾರ ಇತರರಿದ್ದರು.