

ಸಿದ್ದಾಪುರ: ಬೇರೆ ರಾಜ್ಯಗಳಲ್ಲಿ ಒಳ ಮೀಸಲಾತಿ ಜಾರಿ ಪ್ರಗತಿಯಲ್ಲಿದೆ. ನಮ್ಮ ರಾಜ್ಯದಲ್ಲಿ ಸಹ ಒಳ ಮೀಸಲಾತಿ ಜಾರಿಯಾಗುವವರೆಗೂ ಹುದ್ದೆಗಳ ಭರ್ತಿಗೆ ಮುಂದಾಗಬಾರದು ಎಂದು ತಾಲೂಕು ಮಾದಿಗ ಒಳ ಮೀಸಲಾತಿ ಹೋರಾಟ ಸಮಿತಿ ಪದಾಧಿಕಾರಿಗಳು ಕಾರಟಗಿಯ ಕನಕದಾಸ ವೃತ್ತದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.
ಒಳ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಮಾದಿಗ ಸಮುದಾಯಕ್ಕೆ ನ್ಯಾಯಯುತವಾಗಿ ಮೀಸಲಾತಿ ಪ್ರಮಾಣ ದೊರಕುತ್ತಿಲ್ಲ. ನಮ್ಮ ಸಮುದಾಯಕ್ಕೆ ಒಳ ಮೀಸಲಾತಿ ವರ್ಗೀಕರಣಕ್ಕಾಗಿ ಮೂವತ್ತು ವರ್ಷಗಳ ಕಾಲ ನಿರಂತರ ಹೋರಾಟ ಮಾಡಿದ ಫಲವಾಗಿ ಸುಪ್ರೀಂ ಕೋರ್ಟ್ ಒಳ ಮೀಸಲಾತಿ ಜಾರಿಗೊಳಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ ಎಂದು ತೀರ್ಪು ನೀಡಿದೆ.
ಈ ಹಿನ್ನೆಲೆಯಲ್ಲಿ ಹರಿಯಾಣದಲ್ಲಿ ಒಳ ಮೀಸಲಾತಿ ಜಾರಿಗೊಳಿಸಲಾಗಿದೆ. ಇನ್ನೂ ತೆಲಂಗಾಣ ಸಿಎಂ ವಿಧಾನಸಭೆಯಲ್ಲಿ ಒಳ ಮೀಸಲಾತಿ ಜಾರಿಗೊಳಿಸುವ ನಿರ್ಣಯ ಕೈಗೊಂಡು, ಸಚಿವ ಸಂಪುಟದ ಉಪ ಸಮಿತಿ ರಚಿಸಿದ್ದಾರೆ. ಎರಡು ತಿಂಗಳ ಒಳಗೆ ಮೀಸಲಾತಿ ಜಾರಿಗೆ ತರುವುದಾಗಿ ಘೋಷಿಸಿದ್ದಾರೆ. ರಾಜ್ಯದಲ್ಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ತಡೆ ಹಿಡಿಯಬೇಕು.
ಕೆಪಿಎಸ್ ಸಿ ಕರೆದಿರುವ 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ಪೂರ್ವಭಾವಿ ಪರೀಕ್ಷೆಯ ಅಧಿಸೂಚನೆ ಹೊರಡಿಸಿರುವ ನೋಟಿಫಿಕೇಷನ್ ಅನ್ನು ತಡೆಹಿಡಿಯಬೇಕು. ಸರ್ಕಾರದ ಯೋಜನೆಗಳಲ್ಲಿ ಆರ್ಥಿಕ ಮೀಸಲಾತಿ (ಎಸ್ಸಿಎಸ್ಪಿ/ಟಿಎಸ್ಪಿ) ಕೆ.ಐ.ಎ.ಡಿ.ಬಿ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನಗಳನ್ನು ಹಂಚಿಕೆ ಮಾಡುವ ಪ್ರಕ್ರಿಯೆಯೂ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.
ಬಳಿಕ ತಹಸೀಲ್ದಾರ್ ಎಂ. ಕುಮಾರಸ್ವಾಮಿಗೆ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಪ್ರಮುಖರಾದ ಭೀಮೇಶ ಬೂದಗುಂಪಾ, ಸಣ್ಣಗಾಳೇಶ ಇಂದಿರಾನಗರ, ಗಾಂದಿ ಲಿಂಗಪ್ಪ ಪನ್ನಾಪುರ, ಪರಶುರಾಮ್ ನಂದಿಹಳ್ಳಿ, ಮೌನೇಶ ಭಜರಂಗಿ, ಜಮದಗ್ನಿ ಚೌಡಕಿ, ಸಣ್ಣರಾಮಣ್ಣ ಹಳ್ಳಿಕೇರಿ, ಆನಂದ, ಶರಣಪ್ಪ ವಣಗೇರಿ ಇತರರಿದ್ದರು.