

ಬಸವನಬಾಗೇವಾಡಿ: ಲಿಂಗಾಯತರು ಒಳಪಂಗಡಗಳನ್ನು ಬಿಟ್ಟು ಬಸವಣ್ಣನವರು ಸ್ಥಾಪಿಸಿದ ಬಸವಧರ್ಮದ ಆಧಾರದ ಮೇಲೆ ಬದುಕಬೇಕು ಎಂದು ಹಾಸನ ಜಿಲ್ಲೆ ಮುಕಂದೂರು ವಿರಕ್ತಮಠದ ಮಹಾಂತ ಬಸವಲಿಂಗ ಶ್ರೀಗಳು ಹೇಳಿದರು.
ಪಟ್ಟಣದ ವಿರಕ್ತಮಠದಲ್ಲಿ ಲಿಂ.ಸಿದ್ಧೇಶ್ವರ ಸ್ವಾಮಿಗಳ ಸ್ಮರಣಾರ್ಥ ಭಾನುವಾರ ಹಮ್ಮಿಕೊಂಡಿದ್ದ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶ-ವಿದೇಶಗಳಲ್ಲಿ ಮಹಾನ್ ಪುರುಷರು, ದಾರ್ಶನಿಕರು ಬಸವಣ್ಣನವರನ್ನು ಯುಗ ಪುರುಷ ಎಂದು ಕೊಂಡಾಡುತ್ತಿರುವುದು ನಮಗೆಲ್ಲ ಹೆಮ್ಮೆಯಾಗಬೇಕು. ಲಿಂಗಾಯತರು ಒಳಪಂಗಡಗಳನ್ನು ಬಿಟ್ಟು ಬಸವಣ್ಣನವರು ಸ್ಥಾಪಿಸಿದ ಬಸವಧರ್ಮದ ಆಧಾರದ ಮೇಲೆ ಬದುಕಬೇಕು. ಮಹಾನ್ ಚೇತನ ಇಲ್ಲಿ ಹುಟ್ಟಿರುವುದಕ್ಕೆ ನಾವೆಲ್ಲ ಹೆಮ್ಮೆಪಡಬೇಕು. ಇಡಿ ಜಗತ್ತು ನಮ್ಮನ್ನು ನೋಡುತ್ತಿದೆ ಎಂದು ಹೇಳಿದರು.
ತಾಲೂಕಿನ ಇಂಗಳೇಶ್ವರದ ವಿರಕ್ತಮಠದ ವಚನ ಶಿಲಾಮಂಟಪದ ಚನ್ನಬಸವ ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಇಲ್ಲದ ದೇವಾಲಯಗಳನ್ನು ಸುತ್ತುವುದಕ್ಕಿಂತ ಬಸವಣ್ಣನವರು ಕೊಟ್ಟ ಲಿಂಗಪೂಜೆಯನ್ನು ನಿರಂತರವಾಗಿ ಮಾಡಿದರೆ ಶಾಂತಿ ನೆಮ್ಮದಿ ದೊರಕುತ್ತದೆ ಎಂದರು.
ಮುದಗಲ್ಲಿನ ಪ್ರವಚನಕಾರ ಮಹಾಂತ ಶ್ರೀಗಳು ಮಾತನಾಡಿದರು. ಅಥಣಿಯ ಮುರುಘೇಂದ್ರ ಶಿವಯೋಗಿಗಳು, ಇಳಕಲ್ಲಿನ ಮಹಾಂತ ಸ್ವಾಮಿಗಳು, ಬಸವನಬಾಗೇವಾಡಿಯ ಶಿವಲಿಂಗೇಶ್ವರ ಸ್ವಾಮಿಗಳು ಮಾತನಾಡಿದರು. ವಿರಕ್ತಮಠದ ಸಿದ್ಧಲಿಂಗ ಶ್ರೀಗಳು ವಹಿಸಿದ್ದರು. ಪ್ರೊ. ಪಿ.ಎಲ್. ಹಿರೇಮಠ ಸ್ವಾಗತಿಸಿದರು. ಶಿವಾನಂದ ಮಡಿಕೇಶ್ವರ ನಿರೂಪಿಸಿದರು. ಎಚ್.ಬಿ. ಬಾರಿಕಾಯಿ ವಂದಿಸಿದರು.