2032ಕ್ಕೆ ಭಾರತ ವಿಶ್ವದ 3ನೇ ಅತಿದೊಡ್ಡ ರಾಷ್ಟ್ರ: ಕೆ. ಉಲ್ಲಾಸ್ ಕಾಮತ್ ಅಭಿಮತ

32
Published on

ಭಾರತ ಆರ್ಥಿಕತೆಯಲ್ಲಿ 2032ರ ವೇಳೆಗೆ ಜಗತ್ತಿನ ಮೂರನೇ ಅತಿ ದೊಡ್ಡ ರಾಷ್ಟ್ರವಾಗುವ ಎಲ್ಲ ಸಾಧ್ಯತೆಗಳು ಕಾಣಿಸುತ್ತಿವೆ. ದೇಶದ ಆರ್ಥಿಕತೆಗೆ ಸಂಬಂಧಿಸಿ ಅತ್ಯುತ್ತಮ ಕೆಲಸ ಕಾರ್ಯಗಳು ನಡೆಯುತ್ತಿವೆ ಎಂದು ಜ್ಯೋತಿ ಲ್ಯಾಬೊರೇಟರಿಸ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಕೆ. ಉಲ್ಲಾಸ್ ಕಾಮತ್ ಹೇಳಿದರು.

ಅಂತಾರಾಷ್ಟ್ರೀಯ ಲಿಂಗಾಯತ ಯುವ ವೇದಿಕೆ (ಐಎಲ್‌ವೈಎಫ್)ಯಿಂದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ‘ವೀರಶೈವ ಲಿಂಗಾಯತ ಗ್ಲೋಬಲ್ ಬಿಜಿನೆಸ್ ಕಾನ್‌ಕ್ಲೇವ್’ನಲ್ಲಿ ಶುಕ್ರವಾರ ‘ಸಣ್ಣ ಕೈಗಾರಿಕೆ ಮತ್ತು ಕುಟುಂಬ ಉದ್ಯಮ’ ವಿಷಯ ಕುರಿತು ಮಾತನಾಡಿದರು.

ಭಾರತ ಸ್ವಾತಂತ್ರ್ಯಾನಂತರ ಮೊದಲ 40 ವರ್ಷಗಳಲ್ಲಿ ಸರಾಸರಿ ಶೇ.3.5ರ ದರದಲ್ಲಿ ಬೆಳವಣಿಗೆಯಾಗಿತ್ತು. ಈಗ ಶೇ.6-7ರ ಮಟ್ಟಕ್ಕೆ ಏರಿದ್ದೇವೆ. ಭಾರತದ ಆರ್ಥಿಕತೆ 2032ರ ವೇಳೆಗೆ 10 ಟ್ರಿಲಿಯನ್ ಡಾಲರ್ ಆಗಲಿದೆ. ಕರ್ನಾಟಕ ರಾಜ್ಯ ಕೂಡ 2032 ರ ವೇಳೆಗೆ 1 ಟ್ರಿಲಿಯನ್ ಡಾಲರ್ ಮೌಲ್ಯದ ಆರ್ಥಿಕತೆ ಹೊಂದುವ ರಾಜ್ಯವಾಗಲಿದೆ. ಜತೆಗೆ ಮಹಾರಾಷ್ಟ್ರ, ತಮಿಳುನಾಡು, ಗುಜರಾತ್ ಮತ್ತು ಉತ್ತರ ಪ್ರದೇಶ ರಾಜ್ಯಗಳು ಕೂಡ 1 ಟ್ರಿಲಿಯನ್ ಡಾಲರ್ ಮೌಲ್ಯದ ಆರ್ಥಿಕತೆ ಹೊಂದಲಿವೆ ಎಂದರು.

ಕಳೆದ 200 ವರ್ಷಗಳ ಇತಿಹಾಸ ನೋಡುವುದಾದರೆ ಅಮೆರಿಕ, ಯೂರೋಪ್, ಚೈನಾ, ಜಪಾನ್, ದಕ್ಷಿಣ ಕೋರಿಯಾ ಸೇರಿದಂತೆ ಅನೇಕ ಮುಂದುವರಿದ ದೇಶಗಳು ಒಂದು ಉತ್ತಮ ಸಮಯದಲ್ಲಿ(20 ರಿಂದ 25 ವರ್ಷದ ಅವಧಿಯಲ್ಲಿ) ಅಭಿವೃದ್ಧಿ ಹೊಂದಿರುವುದನ್ನು ಕಾಣಬಹುದು. ಇದಕ್ಕೆ ಅನೇಕ ಕಾರಣಗಳಿವೆ. ಅದರಲ್ಲಿ ಯುವ ಜನತೆ ಒಂದು ಮುಖ್ಯ ಕಾರಣವಾಗಿದೆ. ಭಾರತದಲ್ಲಿ ಇದೀಗ ಶೇ.65 ಜನಸಂಖ್ಯೆಯಲ್ಲಿ 35 ವರ್ಷದ ಒಳಗಿನ ಯುವ ಜನತೆಯನ್ನು ನೋಡಬಹುದಾಗಿದೆ. ಸದ್ಯ ನಮ್ಮ ದೇಶ ಪ್ರತಿವರ್ಷ ಶೇ.6 ರಿಂದ 7 ರಷ್ಟು ಅಭಿವೃದ್ಧಿ ಹೊಂದುತ್ತಿದ್ದು, ಮುಂದಿನ 20 ರಿಂದ 30 ವರ್ಷಗಳಲ್ಲಿ ಆರ್ಥಿಕವಾಗಿ ಉತ್ತಮವಾಗಿ ಬೆಳೆಯಲಿದೆ ಎಂದರು.

ಇಡೀ ಪ್ರಪಂಚ ಶೇ.3.2 ರಷ್ಟು ಅಭಿವೃದ್ಧಿ ಹೊಂದುತ್ತಿರುವುದನ್ನು ಕಾಣಬಹುದಾಗಿದೆ. ಈ ಪೈಕಿ ಕೆಲ ದೇಶಗಳು ಶೇ.1ರಷ್ಟು, ಯುಎಸ್ ಶೇ.3, ಕೆಲ ದೇಶಗಳು ಮೈನಸ್ 1, 2ರಷ್ಟು ಅಭಿವೃದ್ಧಿ ಹೊಂದುತ್ತಿರುವ ಸಮಯದಲ್ಲಿ ಭಾರತ ಶೇ.6 ರಿಂದ 7ರಷ್ಟು ಅಭಿವೃದ್ಧಿ ಕಾಣುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಪ್ರಪಂಚದ ಒಟ್ಟು ಅಭಿವೃದ್ಧಿಯಲ್ಲಿ ಏಷ್ಯಾ ಖಂಡದ ಶೇ.75 ರಷ್ಟು ಕೊಡುಗೆ ಇದೆ. ಈ ಪೈಕಿ ಭಾರತ ಮತ್ತು ಚೈನಾ ದೇಶಗಳ ಪಾಲು ಶೇ.50 ರಷ್ಟಿದೆ ಎಂದರು.

ದೇಶದಲ್ಲಿ ಪತ್ರಿ ತಿಂಗಳು 10 ಲಕ್ಷ ಪದವೀಧರರಿಗೆ ಉದ್ಯೋಗ ನೀಡಬೇಕಿದೆ. ಕರ್ನಾಟಕದಲ್ಲಿ ಪ್ರತಿ ವರ್ಷ 21 ಲಕ್ಷ ಪದವೀಧರರು ಹೊರಬರುತ್ತಿದ್ದಾರೆ. ಕರ್ನಾಟಕ ಪದವೀಧರರ ತಯಾರಿಸುವ ಕಾರ್ಖಾನೆಯಾಗಿದೆ. ಎಲ್ಲರಿಗೂ ಸರ್ಕಾರ ಉದ್ಯೋಗ ನೀಡಲು ಆಗಲ್ಲ. ಅವರಿಗೆಲ್ಲ ಹೊಸ ಉದ್ಯಮಗಳಿಂದ ಉದ್ಯೋಗ ಸೃಷ್ಟಿಸಿಕೊಳ್ಳಬಹುದಾಗಿದೆ ಎಂದರು.

ಯುವಕರು ಎಲ್ಲರ ಬಳಿ ಚರ್ಚೆ ಮಾಡಿ ಹೊಸ ಹೊಸ ಉದ್ಯಮಗಳನ್ನು ಉತ್ತಮ ಐಡಿಯಾಗಳೊಂದಿಗೆ ಶುರು ಮಾಡಬೇಕು. ಮೊಬೈಲ್ ಫೋನ್‌ನಲ್ಲಿ ಆರ್ಡರ್ ಮಾಡಿದರೆ 10 ನಿಮಿಷದಲ್ಲಿ ಮಸಾಲೆದೋಸ ಬರುತ್ತದೆ ಎಂದು 15 ವರ್ಷಗಳ ಹಿಂದೆ ಹೇಳಿದ್ದರೆ ನಗುತ್ತಿದ್ದರು. ಆದರೆ, ಈಗ ಅದು ಸತ್ಯ ಆಗಿದೆ. ಇಂತಹ ಐಡಿಯಗಳೊಂದಿಗೆ ಉದ್ಯಮ ಶುರು ಮಾಡಬೇಕು. ಜತೆಗೆ ಶ್ರದ್ಧೆ, ಬದ್ಧತೆಗಳಿರಬೇಕು ಎಂದು ಸಲಹೆ ನೀಡಿದರು. ಜೂನಲ್ಲಿ ಇರುವ ಹುಲಿಗಳಾಗದೆ ಕಾಡಿನಲ್ಲಿ ಇರುವ ಹುಲಿಗಳಾಗಬೇಕು. ಯಾವುದೇ ವಿಚಾರದಲ್ಲಿ ಮುನ್ನುಗ್ಗಿ ಕೆಲಸ ಮಾಡಬೇಕೇ ಹೊರತು ಎಂದೂ ಕಂಫರ್ಟ್ ಜೋನ್‌ನಲ್ಲಿ ಇರಬಾರದು. ಧೈರ್ಯವಾಗಿ ಉತ್ತಮ ಐಡಿಯಾಗಳೊಂದಿಗೆ ಕೆಲಸ ಮಾಡಿದರೆ ಖಂಡಿತ ಯಶಸ್ಸು ದೊರೆಯಲಿದೆ ಎಂದರು.

ಒಳ್ಳೆಯದಕ್ಕೆ ಇಂಟರ್ನೆಟ್ ಬಳಸಿ:

ಇಂದು ಸಾಮಾಜಿಕ ಜಾಲತಾಣಗಳ ಬಳಕೆ ದೊಡ್ಡ ಶತ್ರುಗಳಾಗಿವೆ. ಭಾರತದಲ್ಲಿ 14 ರಿಂದ 22 ವರ್ಷದೊಳಗಿನವರು ಪ್ರತಿದಿನ 7.5 ಗಂಟೆ ಕಾಲ ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ನಿರತರಾಗಿದ್ದಾರೆ. ಇವರೆಲ್ಲ ವಿದ್ಯಾರ್ಥಿಗಳಾಗಿದ್ದಾರೆ. ತಮ್ಮ ನಿದ್ದೆ ಸಮಯವನ್ನು ಇದಕ್ಕೆ ಮೀಸಲಿಡುತ್ತಿದ್ದಾರೆ. ಇದರಿಂದ ಅವರ ಆರೋಗ್ಯ ಹಾಳಾಗುವ ಜತೆಗೆ ಅತ್ಯುತ್ತಮ ಸಮಯ ಹಾಳಾಗುತ್ತಿದೆ. ಆದ್ದರಿಂದ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ಕಡಿಮೆ ಮಾಡಬೇಕು. ಒಳ್ಳೆಯ ಉದ್ದೇಶಕ್ಕೆ ಮಾತ್ರ ಇಂಟರ್‌ನೆಟ್ ಬಳಕೆ ಮಾಡಬೇಕು ಎಂದರು.

ಮಹಿಳಾ ಸಬಲೀಕರಣ ಮುಖ್ಯ:

ಭಾರತ ದೇಶವು ಮಹಿಳಾ ಸಬಲೀಕರಣದಲ್ಲಿ ಮುಂದಿದೆ. ಉದ್ಯಮ ಕ್ಷೇತ್ರದಲ್ಲಿ ಮಹಿಳೆಯರ ಬಲವನ್ನು ಹೆಚ್ಚಿಸಿದೆ. ಇಂದು ಜಗತ್ತಿನ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಿದ್ದಾರೆ. ಇದಕ್ಕೆ ಭಾರತೀಯ ನಾರಿಯರೂ ಹೊರತಾಗಿಲ್ಲ. ತಮ್ಮನ್ನು ಹಾಗೂ ಕುಟುಂಬವನ್ನು ಬೆಂಬಲಿಸಲು ವೃತ್ತಿಯನ್ನು, ಉದ್ಯಮವನ್ನು ನಡೆಸುವ ಗುಣ ಅವರಲ್ಲಿದೆ. ಮಲ್ಟಿ ಟಾಸ್ಕ್ ನಿಭಾಯಿಸುವುದರಿಂದ ರಾಷ್ಟ್ರದ ಆರ್ಥಿಕ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ದೊಡ್ಡದು. ಇಂದು ಪುರುಷರಿಗಿಂತ ಮಹಿಳಾ ಉದ್ಯಮಿಗಳೇ ಹೆಚ್ಚು ಯಶಸ್ಸು ಕಂಡಿರುವುದನ್ನು ಕಾಣಬಹುದಾಗಿದೆ ಎಂದರು.

ಈ ಸ್ತ್ರೀ ನೇತೃತ್ವದ ಅನೇಕ ಯಶಸ್ವಿ ಉದ್ಯಮಗಳು ಬಹಳಷ್ಟು ಉದ್ಯೋಗಗಳನ್ನು ಸೃಷ್ಟಿಸುತ್ತಿವೆ. ಈ ಮೂಲಕ ವಿವಿಧ ಕುಟುಂಬಗಳಿಗೆ ಆದಾಯದ ಮೂಲಗಳನ್ನು ಒದಗಿಸುತ್ತಿವೆ. ಹಾಗಾಗಿ, ಮಹಿಳೆಯರೂ ಉದ್ಯಮ ಸೃಷ್ಟಿಗೆ ಮುಂದಾಗಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net