

ಬೆಳಗಾವಿ : ಬಸವಾದಿ ಶಿವಶರಣರಿಂದ 12ನೇ ಶತಮಾನದಲ್ಲಿಸೃಷ್ಟಿಯಾದ ವಚನ ಸಾಹಿತ್ಯವು ಮಠಗಳು ಮತ್ತು ಮಠಾಧೀಶರ ಶ್ರಮದಿಂದ ಇಂದಿಗೂ ಉಳಿದು ಬೆಳೆದು ಬಂದಿದೆ. ಹಾನಗಲ್ಲ ಕುಮಾರ ಶಿವಯೋಗಿಗಳು ಈ ನಿಟ್ಟಿನಲ್ಲಿ ಮಾಡಿದ ಪ್ರಯತ್ನ ಅನನ್ಯವಾದುದು ಎಂದು ಕಾರಂಜಿಮಠದ ಶ್ರೀಗುರುಸಿದ್ಧ ಸ್ವಾಮೀಜಿ ಅಭಿಪ್ರಾಯ ಪಟ್ಟರು.
ಕಾರಂಜಿಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 266ನೇ ಶಿವಾನುಭವ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು, 12ನೇ ಶತಮಾನದ ಶರಣರ ಕ್ರಾಂತಿಯ ತರುವಾಯ ಗುಪ್ತನಿಧಿಯಾಗಿದ್ದ ವಚನಗಳನ್ನು ಬೆಳಕಿಗೆ ತರುವಲ್ಲಿ 15ನೇ ಶತಮಾನದಲ್ಲಿ ತೋಂಟದ ಸಿದ್ಧಲಿಂಗ ಯತಿಗಳ ನೇತೃತ್ವದಲ್ಲಿ ನೂರೊಂದು ವಿರಕ್ತರ ಪಡೆಯೇ ಕಾರ್ಯಪ್ರವೃತ್ತವಾಯಿತು. ಹೀಗಾಗಿ ವಚನಗಳು ನಮಗೆ ಸಂರಕ್ಷಿತವಾಗಿ ದೊರಕಿದವು ಎಂದು ಹೇಳಿದರು.
‘ವಚನ ಸಂರಕ್ಷಣೆಯಲ್ಲಿ ಮಠಗಳ ಪಾತ್ರ’ ಕುರಿತು ಪ್ರಕಾಶ ಗಿರಿಮಲ್ಲನವರ ವಿಶೇಷ ಉಪನ್ಯಾಸ ನೀಡಿದರು. ಇದೇ ಸಂದೌರ್ಭದಲ್ಲಿ ಓಲಂಪಿಕ್ ಕ್ರೀಡಾ ಚಟುಚಟಿಕೆಯಲ್ಲಿ ಸಾಧನೆ ಮಾಡಿದ ಪ್ರೀತಿ ಚಂದ್ರಶೇಖರಯ್ಯ ಸವದಿ ಮತ್ತು ಆಸ್ಸಾಂ ರೆಜಿಮೆಂಟಿಗೆ ನೇರವಾಗಿ ಆಯ್ಕೆಯಾದ ವಿದ್ಯಾ ಮುಂಗರವಾಡಿ ಅವರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು.
ಈರಣ್ಣ ದೇಯಣ್ಣವರ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರಂಜಿಮಠದ ಉತ್ತರಾಧಿಕಾರಿ ಶ್ರೀ.ಡಾ.ಶಿವಯೋಗಿ ದೇವರು ಕಾರ್ಯಕ್ರಮದ ನೇತೃತ್ವ ವಹಿಸಿಕೊಂಡಿದ್ದರು. ಎ.ಕೆ.ಪಾಟೀಲ ನಿರೂಪಿಸಿದರು. ವಿ.ಕೆ. ಪಾಟೀಲ ವಂದಿಸಿದರು.