

ಉಡುಪಿ: ವೀರಶೈವ-ಲಿಂಗಾಯತ ಸಮುದಾಯದ ಎಲ್ಲ ಪಂಗಡಗಳನ್ನು ಕೇಂದ್ರದ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಯಲ್ಲಿ ಸೇರಿಸುವಂತೆ ಆಗ್ರಹಿಸಿ ಆ.1ರಂದು ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಬಹಿರಂಗ ಸಭೆ ಏರ್ಪಡಿಸಲಾಗಿದೆ. ಸಭೆಯಲ್ಲಿ ಪ್ರಮುಖ ಮಠಾಧೀಶರು, ಸಮಾಜದ ಮುಖಂಡರು ಭಾಗವಹಿಸಲಿದ್ದಾರೆ. ನಂತರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ರಾಜ್ಯ ಯುವ ವಿಭಾಗ ಅಧ್ಯಕ್ಷ ಮನೋಹರ ಅಬ್ಬಿಗೆರೆ ತಿಳಿಸಿದರು.
ಶನಿವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕೃತ ಮಾಹಿತಿಯ ಪ್ರಕಾರ ವೀರಶೈವ-ಲಿಂಗಾಯತ ಸಮುದಾಯ ಈಗಾಗಲೇ ರಾಜ್ಯ ಮತ್ತು ಕೇಂದ್ರದ ಹಿಂದುಳದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿ ಸೇರಿರುವ ತಿಗಳ, ಈಡಿಗೆ, ಒಕ್ಕಲಿಗ, ದೇವಾಂಗ ಮತ್ತು ಬಲಿಜ ಸಮುದಾಯಗಳಗಿಂತ ಹಿಂದುಳಿದಿದ್ದರೂ ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಯಿಂದ ಹೊರಗಿಟ್ಟಿರುವುದಕ್ಕೆ ಯಾವುದೇ ಕಾರಣಗಳಿರುವುದಿಲ್ಲ. ವೀರಶೈವ ಲಿಂಗಾಯತ ಸಮುದಾಯದ ಪ್ರತಿಭಾವಂತರು ದಶಕಗಳಿಂದ ಅವಕಾಶಗಳಿಂದ ವಂಚಿತರಾಗಿದ್ದಾರೆ. ಇದರಿಂದಾಗಿ ಕೇಂದ್ರ ಸರ್ಕಾರದ ಅಖಿಲ ಭಾರತ ಸೇವೆಗಳಲ್ಲಿ , ಸಾರ್ವಜನಿಕ ಉದ್ಯಮಗಳಲ್ಲಿ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಉದ್ಯೋಗವಕಾಶಗಳಲ್ಲಿ ವೀರಶೈವ-ಲಿಂಗಾಯತ ಸಮುದಾಯದವರು ಬೆರಳಿಗೆಕೆಯಷ್ಟು ಮಾತ್ರ ಇದ್ದಾರೆ. ಅದೇ ರೀತಿ ಕೇಂದ್ರ ಸ್ವಾಮ್ಯದ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳಲ್ಲಿ , ಕೇಂದ್ರಿಯ ವಿಶ್ವವಿದ್ಯಾಲಯಗಳು, ಕೇಂದ್ರೀಯ ವಿದ್ಯಾಲಯ, ನವೋದಯ ಶಾಲೆಗಳಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವಕಾಶ ಸಿಗುತ್ತಿಲ್ಲ. ಹೀಗಾಗಿ 100ಕ್ಕೂ ಅಧಿಕ ಉಪಪಂಗಡಗಳನ್ನು ಒಳಗೊಂಡ ವೀರಶೈವ-ಲಿಂಗಾಯತ ಸಮುದಾಯವನ್ನು ಸಮಗ್ರವಾಗಿ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಬೇಕು ಎಂದು ಆಗ್ರಹಿಸಿದರು.
ಸಾಮಾನ್ಯವಾಗಿ ರಾಜ್ಯ ಹಿಂದುಳಿದ ಪಟ್ಟಿಯಲ್ಲಿರುವ ಜಾತಿ ಅಥವಾ ಪಂಗಡಗಳನ್ನು ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲಾಗುತ್ತದೆ. ಕರ್ನಾಟಕ ರಾಜ್ಯದಲ್ಲಿ ಕಳೆದ 60 ವರ್ಷಗಳಿಂದ ವೀರಶೈವ ಲಿಂಗಾಯತ ಸಮುದಾಯ ರಾಜ್ಯದ ಇತರೇ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿದ್ದರೂ ಈ ವರ್ಗವನ್ನು ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸದೇ ಇರುವುದು ದುರದೃಷ್ಟಕರ ಸಂಗತಿ ಎಂದು ಹೇಳಿದರು.
ಕೋಶಾಧ್ಯಕ್ಷ ಗೋವರ್ಧನ ಜೆ.ಸಿ., ಕಾರ್ಯದರ್ಶಿ ಅಕ್ಷತ್ ಎನ್.ಎಂ., ಜಿಲ್ಲಾಧ್ಯಕ್ಷ ಗಿರೀಶ್ ಕುಮಾರ್ ಪಾಂಗಾಳ, ಉಪಾಧ್ಯಕ್ಷ ಶಾಂತನಗೌಡರ್, ಕಾರ್ಯದರ್ಶಿ ಸುರೇಶ್ ಎಸ್.ಕೆ., ಸಿದ್ದಬಸವ ಸ್ವಾಮೀಜಿ ಉಪಸ್ಥಿತರಿದ್ದರು.