

ಹುಬ್ಬಳ್ಳಿ: ವೀರಶೈವ ಲಿಂಗಾಯತ ಎರಡೂ ಬೇರೆ ಬೇರೆ ಅಲ್ಲ, ಅವೆರಡೂ ಒಂದೇ ಆಗಿವೆ. ಒಂದು ವೇಳೆ ಬೇರೆಯಾದರೆ ಸಮಾಜ ಛಿದ್ರವಾಗಲಿದೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿದರು.
ನಗರದ ಸವಾಯಿ ಗಂಧರ್ವ ಹಾಲ್ ನಲ್ಲಿ ಭಾನುವಾರ ಏರ್ಪಡಿಸಿದ್ದ ವೀರಶೈವ ಲಿಂಗಾಯತ ಎಲ್ಲ ಒಳಪಂಗಡಗಳ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಗೌರವ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮೀಸಲಾತಿ ಬಗ್ಗೆ ಬಹಳ ಚರ್ಚೆ ನಡೆದಿದೆ. ಕೇಂದ್ರದ ಒಬಿಸಿ ಪಟ್ಟಿಯಲ್ಲಿ ವೀರಶೈವ ಲಿಂಗಾಯತ ಸೇರಿಸಲು ಸರ್ವ ಪ್ರಯತ್ನಗಳು ನಡೆದಿವೆ. ಈ ದಿಸೆಯಲ್ಲಿ ಎಲ್ಲ ಒಳಪಂಗಡಗಳು ಒಟ್ಟಾಗಿ ಇರಬೇಕು ಎಂದರು.
ಮಕ್ಕಳಿಗೆ ಪುರಸ್ಕಾರ ನೀಡುವುದರಿಂದ ಅವರಿಗೆ ಉತ್ತೇಜನ ಸಿಗುವುದಲ್ಲದೇ ಸಮಾಜದ ಬಗ್ಗೆ ಕಾಳಜಿ ಬೆಳೆಯುತ್ತದೆ ಎಂದರು.
ಜಾತಿ ಗಣತಿ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ. ಈ ಹಿಂದೆ ಜಾತಿ ಗಣತಿ ಮಾಡಿ ರಾಜ್ಯ ಸರ್ಕಾರ ಗೊಂದಲ ಉಂಟು ಮಾಡಿ ಕೈ ಸುಟ್ಟು ಕೊಂಡಿದೆ. ಮತ್ತೆ ಅಂತಹ ತಪ್ಪು ಮಾಡಬಾರದು ಎಂದು ಶೆಟ್ಟರ್ ಸಲಹೆ ನೀಡಿದರು.
ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರು ಬಹಳ ಜನರಿದ್ದಾರೆ. ಹಾಗಾಗಿ ಎಲ್ಲ ಉಪಪಂಗಡಗಳಿಗೆ ಮೀಸಲಾತಿ ಸಿಗಬೇಕು. ಸ್ವಾಮೀಜಿಗಳಾದವರು ಸಮಾಜ ಒಡೆಯುವ ಕೆಲಸ ಮಾಡಬಾರದು ಎಂದರು.
ಮಾಜಿ ಸಂಸದ ಮಂಜುನಾಥ ಕುನ್ನೂರ ಮಾತನಾಡಿ, ಜಾತಿ ಗಣತಿ ಎಂಬುದು ಜೇನುಗೂಡಿಗೆ ಕಲ್ಲು ಹೊಡೆದಂತೆ. ಈ ದಿಸೆಯಲ್ಲಿ ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ ಎಂದರು.
ಕಠಿಣ ಪರಿಶ್ರಮದಿಂದ ಯಶಸ್ಸು ಸಿಕ್ಕೇ ಸಿಗುತ್ತದೆ ಎಂಬುದನ್ನು ವಿದ್ಯಾರ್ಥಿಗಳು ಮಾಡಿ ತೋರಿಸಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಚಾಲಕ ಮಲ್ಲಿಕಾರ್ಜುನ ಸಾವಕಾರ ಪ್ರಾಸ್ತಾವಿಕ ಮಾತನಾಡಿ, ಕಳೆದ ನಾಲ್ಕು ವರ್ಷದಿಂದ ಪುರಸ್ಕಾರ ಮಾಡುತ್ತಿದ್ದೇವೆ. ೮೨ ಒಳಪಂಗಡ ಇವೆ. ಆದರೆ, ಅನೇಕ ಒಳಪಂಗಡದ ಮಕ್ಕಳಿಗೆ ಪುರಸ್ಕಾರ ಸಿಗುವುದಿಲ್ಲ. ಅವರಿಗೆ ಸನ್ಮಾನಿಸಬೇಕು ಎಂಬ ಇಚ್ಚೆಯಿಂದ ಈ ಕಾರ್ಯಕ್ರಮ ಮಾಡಲಾಗಿದೆ. ನಮ್ಮ ಸಂಸ್ಕಾರ ಉಳಿಸಿ ಬೆಳೆಸುವ ಕಾರ್ಯವನ್ನೂ ಮಾಡಲಾಗುತ್ತಿದೆ ಎಂದರು.
ಮೂರು ಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಜ್ಞಾನ ರತ್ನ ಧರಿಸಿದವರಿಗಿಂತ ಶ್ರೀಮಂತರು ಯಾರೂ ಇಲ್ಲ. ಎಲ್ಲ ವಿಷಯಗಳಲ್ಲಿ ಭೌತ ಜ್ಞಾನ ನಿಮಗಿದೆ.
ಅಭೌತ ಜ್ಞಾನ ಎಂಬುದು ಧರ್ಮದಿಂದ ಸಿಗುತ್ತದೆ.
ಮಠ ಮಾನ್ಯಗಳಲ್ಲಿ ಸಿಗುತ್ತದೆ ಎಂದರು.
ವಿಷಯ ಜ್ಞಾನ ಹೊಟ್ಟೆ ತುಂಬಿಸ್ತದೆ. ಧರ್ಮದಿಂದ ಆತ್ಮ ದರ್ಶನ ಆಗ್ತದೆ. ಮಕ್ಕಳಿಗೆ ಭಗವತ್ ಸ್ವರೂಪವಾದ ಲಿಂಗ, ಭಸ್ಮ ಕೊಡಲಾಗಿದೆ. ಅದರ ಮೂಲಕ ಧರ್ಮವನ್ನೂ ಆಚರಿಸಿ ಎಂದು ಆಶೀರ್ವದಿಸಿದರು.
ಸಹ ಸಂಚಾಲಕ ಪ್ರಕಾಶ ಬೆಂಡಿಗೇರಿ ಸ್ವಾಗತಿಸಿದರು.
ಪ್ರೊ. ಸುರೇಶ ಕುನ್ನೂರ, ಡಾ. ಸಿದ್ದನಗೌಡ ಪಾಟೀಲ, ಪರಿಸರ ಪ್ರೇಮಿ ಚನ್ನು ಹೊಸಮನಿ, ಡಾ. ಲಿಂಗರಾಜ ಮುಳ್ಳಳ್ಳಿ, ಇತರರಿಗೆ ಗೌರವ ಸನ್ಮಾನ ನೀಡಲಾಯಿತು.
ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿಭಾಗದ
೭೨ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಹುಬ್ಬಳ್ಳಿಯ ಕಲಬುರ್ಗಿಮಠದ ಶ್ರೀ ಚರಲಿಂಗ ಸ್ವಾಮೀಜಿ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಉದ್ಯಮಿ ವಿಜಯಕುಮಾರ ಶೆಟ್ಟರ್, ಈರಣ್ಣ ಕಲ್ಲೂರ, ಸದಾಶಿವ ಚೌಶೆಟ್ಟಿ, ಮಹಾಂತೇಶ ಗಿರಿಮಠ, ಶಂಭು ಲಕ್ಷ್ಮೇಶ್ವರಮಠ, ನಾಗರಾಜ ಗೌರಿ, ಇತರರು ಇದ್ದರು.