ಉಳವಿಯಲ್ಲಿ ಮೇ 23 ರಂದು ಪಂಚಮಸಾಲಿ ಮೀಸಲಾತಿ ಹೋರಾಟ ಸಮಿತಿಯ ರಾಜ್ಯ ಪದಾಧಿಕಾರಿಗಳ ಸಭೆ

Jaya-Mrtutyunjaya-Swamiji.
Published on

ಕಾರವಾರ: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಹಿಂದುಳಿದ ವರ್ಗ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಮುಂದಿನ ಹೋರಾಟದ ರೂಪುರೇಶೆಯನ್ನು ರೂಪಿಸಲು ಮೇ 23 ರಂದು ಜೊಯಿಡಾ ತಾಲೂಕಿನ ಉಳವಿಯ ಚೆನ್ನಬಸವೇಶ್ವರ ಸನ್ನಿಧಾನದಲ್ಲಿ ರಾಜ್ಯಮಟ್ಟದ ಪದಾಧಿಕಾರಿಗಳ ಸಂಕಲ್ಪ ಸಭೆಯನ್ನು ಆಯೋಜಿಸಲಾಗಿದೆ ಎಂದು ಕೂಡಲಸಂಗಮ ಕ್ಷೇತ್ರದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾ ಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಾಯತ ಪಂಚಮಸಾಲಿಗಳು ಸಾಮಾಜಿಕವಾಗಿ ಹಿಂದುಳಿದಿದ್ದು, ಅವರನ್ನು 2ಎ ಮೀಸಲಾತಿಯಡಿ ಸೇರಿಸಬೇಕು ಎಂದು ಹೋರಾಟ ನಡೆಸುತ್ತ ಬಂದಿದ್ದೇವೆ. ಬೆಂಗಳೂರಿನಲ್ಲಿ ನಿರಂತರ ಧರಣಿ ನಡೆಸಿದ ಪರಿಣಾಮ ಹಿಂದಿನ ಬಿಜೆಪಿ ಸರ್ಕಾರ 2ಡಿ ಎಂಬ ವಿಶೇಷ ಅವಕಾಶ ಕಲ್ಪಿಸಿ ಶೇ.7.5 ರಷ್ಟು ಮೀಸಲಾತಿ ನೀಡುವುದಾಗಿ ಘೋಷಿಸಿತು. ಆದರೆ, ಸರ್ಕಾರ ಬದಲಾಗಿದ್ದರಿಂದ ಅದು ಜಾರಿಯಾಗಿಲ್ಲ.
ಸಿದ್ದರಾಮಯ್ಯ ಸರ್ಕಾರ ಬಂದ ನಂತರ ಡಿಸೆಂಬರ್ ತಿಂಗಳಲ್ಲಿ ಬೆಳಗಾವಿ ಅಽವೇಶನದ ವೇಳೆ ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಯೋಜಿಸಿದ್ದೆವು. ಆಗ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ಅವರು ಕೆಲ ದಿನ ಸಮಯ ನೀಡಿ, ಚರ್ಚಿಸಿ ನಿರ್ಣಯ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದ್ದರು. ಅವರ ಭರವಸೆ ನೀಡಿ ಐದು ತಿಂಗಳು ಕಳೆದಿದೆ. ಇದರಿಂದ ಮುಂದೆ ಯಾವ ರೀತಿ ಹೋರಾಟ ನಡೆಸಬೇಕು ಎಂಬ ಯೋಜನೆ ರೂಪಿಸಲು ರಾಜ್ಯಾದ್ಯಂತ ಓಡಾಟ ಮಾಡಿ, ಲಿಂಗಾಯತ ಪಂಚಮಸಾಲಿಗಳ ಸಭೆ ನಡೆಸಲಾಗುತ್ತಿದೆ.
ಇದುವರೆಗೆ 12 ಜಿಲ್ಲೆಗಳಲ್ಲಿ ಸಭೆ ನಡೆಸಲಾಗಿದೆ. 13 ನೇ ಜಿಲ್ಲೆಯಾಗಿ ಉತ್ತರ ಕನ್ನಡದಲ್ಲಿ ಸಭೆ ನಡೆಸಲಾಗುತ್ತಿದೆ. ಅಂದು ಮಧ್ಯಾಹ್ನ 3 ಗಂಟೆಯಿAದ ಸಭೆ ಆರಂಭವಾಗಲಿದೆ. ಸುಮಾರು 200 ಜನ ಪದಾಽಕಾರಿಗಳು ಆಗಮಿಸುವ ಸಾಧ್ಯತೆ ಇದೆ. ಮೇ. 24 ರಂದು ಬೆಳಗ್ಗೆ ಲಿಂಗ ಪೂಜೆಯೊಂದಿಗೆ ಸಭೆಯನ್ನು ಮುಕ್ತಾಯ ಮಾಡಲಾಗುವುದು ಎಂದು ತಿಳಿಸಿದರು.
ಈ ಸಭೆಯಲ್ಲಿ ಆದ ನಿರ್ಣಯವನ್ನು ಇಟ್ಟುಕೊಂಡು ಜೂನ್ ತಿಂಗಳ ಎರಡನೇ ವಾರದಲ್ಲಿ ಸಮುದಾಯದ ಶಾಸಕರು, ಮಾಜಿ ಶಾಸಕರು, ಸಚಿವರ ಸಭೆಯನ್ನು ಮಲೆ ಮಹಾದೇಶ್ವರ ಬೆಟ್ಟದ ಮೇಲೆ ಕರೆಯಲಾಗುವುದು. ಪಂಚಮಸಾಲಿಗಳಿಗೆ 2ಎ ಮೀಸಲಾತಿ ನೀಡಿ, ಇಲ್ಲವೇ ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಲಿಂಗಾಯತರನ್ನು ಸೇರಿಸಿ ಎಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ ಎಂದರು. ಹೋರಾಟದ ಕಾನೂನು ಸಲಹೆಗಾರ ಚನ್ನಬಸಪ್ಪ ಬಿ.ಬಾಗೇವಾಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net