

ಮುಂಡರಗಿ: ಬಸವಾದಿ ಶರಣರು ಜಗತ್ತಿನೊಳಗೆ ನಿಮ್ಮನ್ನು ವ್ಯಕ್ತಿನಿಷ್ಠ ವಾಸ್ತವದಿಂದ ವಸ್ತುನಿಷ್ಠ ವಾಸ್ತವದ ಕಡೆಗೆ ತಂದವರು.
ವ್ಯವಸ್ಥೆ ಬದಲಾಯಿಸುವುದಲ್ಲ, ವ್ಯವಸ್ಥೆಯೊಳಗೆ ನ್ಯೂನತೆಗಳನ್ನು ಪರಿಪೂರ್ಣತೆಗೆ ತಂದಿರುವ ಏಕೈಕ ಸಿದ್ಧಾಂತ ಯಾವುದಾದರೂ ಇದ್ದರೆ ಅದು ಶರಣ ಸಿದ್ಧಾಂತ ಎಂದು ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಜಗದ್ಗುರು ತೋಂಟದಾರ್ಯ ಶಾಖಾಮಠದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವಧರ್ಮ ಪ್ರವಚನದಲ್ಲಿ ಮಾತನಾಡಿದ ಅವರು, ಲಿಂಗಾಯತ ಎಂದರೆ ವಿಶ್ವ ಕುಟುಂಬಿ, ವಿಶ್ವ ಮಾನವ. ಮಾನವ ಹಕ್ಕುಗಳ ಹೋರಾಟಗಾರ ಪ್ರತಿನಿಧಿಯೇ ಲಿಂಗಾಯತ.
ಅಸ್ಮಿತಿಗೆ ಗೌರವ ತರುವಂಥದ್ದು ಲಿಂಗಾಯತ. ಎಲ್ಲರೂ ಲಿಂಗ ಧರಿಸಿ, ವಚನಗಳನ್ನು ಓದಿದರೆ ಜೀವನದ ಬದುಕು ಸ್ಪಷ್ಟಿಕರಣ ಆಗುತ್ತದೆ ಎಂದರು.
ಜಗತ್ತಿನಲ್ಲಿ ಬಂದಂತ ಎಲ್ಲ ಮಹಾತ್ಮರು ದೇವರು ಮತ್ತು ಧರ್ಮದ ಬಗ್ಗೆ ಹೇಳಿದರು. ಆದರೆ, ಬಸವಣ್ಣ ದೇವರು, ಧರ್ಮದ ಬಗ್ಗೆ ಮಾತನಾಡದೇ ಮನುಷ್ಯರ ಬಗ್ಗೆ ಮಾತನಾಡಿದರು.
ಬಸವಣ್ಣ ಪ್ರೀತಿ, ವಾತ್ಸಲ್ಯ, ಮಮತೆಯ ಕರುಣೆಯನ್ನು ಕೊಟ್ಟಂಥವರು. ಕರ್ತವ್ಯ ಧರ್ಮ ಪ್ರತಿಪಾದನೆ ಮಾಡಿದರು ಎಂದು ತಿಳಿಸಿದರು.
ಈ ಜಗತ್ತಿನೊಳಗಡೆ ಶರಣರು ಎಲ್ಲ ಧರ್ಮಗಳ ವಿಚಾರಗಳನ್ನು ಚರ್ಚೆ ಮಾಡಿದಂತ ಏಕೈಕ ಜಾಗವಿದ್ದರೆ ಅದು ಅನುಭವ ಮಂಟಪದಲ್ಲಿ ಮಾತ್ರ.
ಶರಣರು ಕಲ್ಪನಾ ಲೋಕದವರಲ್ಲ, ನೈಜ ಪಾರದರ್ಶಕದವರು. ಬ್ರಹ್ಮವೆಂದರೆ ಸೃಷ್ಟಿ, ವಿಷ್ಣು ಎಂದರೆ ಅದನ್ನು ನಡೆಸುವವನು, ರುದ್ರನೆಂದರೆ ಬೇಡವಾದಾಗ ಅದನ್ನು ಲಯ ಮಾಡುವನು ಎಂದರು.