

ಮಂಡ್ಯ: ಕಲಬುರಗಿ ಜಿಲ್ಲೆಯ ಚಿತ್ತಾಪುರದ ಕಲ್ಲಕಟ್ಟಿ ಗ್ರಾಮದಲ್ಲಿ ವಿಶ್ವಗುರು ಬಸವಣ್ಣ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ವಿರೂಪಗೊಳಿಸಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸಬೇಕೆಂದು ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಎಂ.ಎಸ್.ಮಂಜುನಾಥ್ ಆಗ್ರಹಿಸಿದರು.
ಮಹಾಮಾನವತಾವಾದಿ ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಅ.11ರಂದು ಬೆಂಕಿ ಹಾಕಿ ವಿರೂಪಗೊಳಿಸಿರುವ ಕಿಡಿಗೇಡಿಗಳನ್ನು ಬಂಧಿಸಿ ಉಗ್ರವಾದ ಕಠಿಣ ಜೀವವಾಧಿ ಶಿಕ್ಷೆ ವಿಧಿಸಬೇಕು. ಈ ಮೂಲಕ ಬಸವಣ್ಣ ಅವರ ಭಕ್ತರು, ಅನುಯಾಯಿಗಳಿಗೆ ಸೂಕ್ತ ನ್ಯಾಯ ದೊರಕಿಸಿಕೊಡಬೇಕೆಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಈ ಪ್ರಕರಣದಲ್ಲಿ ರಾಜ್ಯ ಸರ್ಕಾರದ ವೈಫಲ್ಯ ಮತ್ತು ಅಧಿಕಾರಿಗಳ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ. ಬಸವಣ್ಣ ಅವರು ಜಾತಿ, ವರ್ಗ ರಹಿತವಾಗಿ ಎಲ್ಲರನ್ನೂ ಅಪ್ಪಿ ಒಪ್ಪಿದಂತವರು. 21ನೇ ಶತಮಾನದಲ್ಲಿ ತುಳಿತಕ್ಕೆ ಒಳಗಾದ ಅಸ್ಪಶ್ಯರನ್ನು ಸಾಮಾಜಿಕವಾಗಿ ಮೇಲೆತ್ತುವ ಕೆಲಸ ಮಾಡಿದರು. ಜಾತಿ ರಹಿತವಾಗಿ ಎಲ್ಲರಿಗೂ ನ್ಯಾಯ ದೊರಕಿಸಿಕೊಟ್ಟವರು. ಇಂತಹ ಮಹಾನ್ ವ್ಯಕ್ತಿಯನ್ನು ಭಾರತ ಭೂಮಿ ಪಡೆದಿದ್ದ ಮಹಾಪುಣ್ಯ. ಅವರ ಆದರ್ಶ, ಮಾರ್ಗದರ್ಶನ ನಾಡಿಗೆ, ದೇಶಕ್ಕೆ ಸ್ಪೂರ್ತಿ. ಕಾಯಕಕ್ಕೆ ಹೆಚ್ಚಿನ ಮಹತ್ವವನ್ನು ನೀಡಿ ವಚನ ಸಾಹಿತ್ಯ ರಚಿಸಿ, ಎಲ್ಲರಿಗೂ ಸಮಾನತೆಯನ್ನು ಸಾರಿದ ಮಹಾನ್ ಮಾನವತಾವಾದಿ ಇವರಿಗೆ ಆಗಿರುವ ಹೀನ ಕೃತ್ಯಕ್ಕೆ ಇಡೀ ಸಮಾಜ ತಲೆ ತಗ್ಗಿಸುವಂತಾಗಿದೆ. ಕಿಡಿಗೇಡಿಗಳನ್ನು ತಕ್ಷಣ ಬಂಧಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ವೀರಶೈವ ಲಿಂಗಾಯತ ವಿದ್ಯಾರ್ಥಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಬಿ.ಪಿ.ಜೀವನ್, ಮುಖಂಡರಾದ ನಂದೀಶ, ಶಿವಪ್ರಸಾದ್, ನಾಗೇಶ್ ಇದ್ದರು.