

ಹುಬ್ಬಳ್ಳಿ: ಜಾತಿ ಗಣತಿ ವಿಷಯದಲ್ಲಿ ಲಿಂಗಾಯತ ಮುಖಂಡರು ಮಾತನಾಡುತ್ತಿರುವ ಸಂಗತಿಗಳು ಅವರ ಊಹೆ ಅಷ್ಟೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಗಣತಿ ಬಗ್ಗೆ ವರದಿಯೇ ಬಂದಿಲ್ಲ. ಅದರ ಒಳಗಡೆ ಏನಿದೆ ಎಂಬುದು ನಿಮಗೆ ಗೊತ್ತಾ? ಅವರಿಗೂ ಗೊತ್ತಿಲ್ಲ. ನನಗೂ ಗೊತ್ತಿಲ್ಲ. ಅವರು ಊಹೆ ಮೇಲೆ ಹೇಳುತ್ತಿದ್ದಾರೆ, ನೋಡೋಣ ಎಂದರು.
ಬೆಳಗಾವಿ ಜಿಲ್ಲೆ ಹೊಸ ವಂಟಮುರಿ ಗ್ರಾಮದ ಮಹಿಳೆಯ ಮೇಲೆ ನಡೆದ ದೌರ್ಜನ್ಯ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ರಾಜಕೀಯ ಮಾಡುತ್ತಿದ್ದಾರೆ. ಮಹಿಳೆಯ ಮೇಲೆ ಆಗಿರುವ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕಾನೂನು ರೀತಿಯಲ್ಲಿ ಎಲ್ಲ ಕ್ರಮ ತೆಗೆದುಕೊಂಡಿದೆ. ಗೃಹ ಸಚಿವರು ತಕ್ಷಣ ಆಸ್ಪತ್ರೆಗೆ ಹೋಗಿ ಮಹಿಳೆಯನ್ನು ಭೇಟಿ ಮಾಡಿ ಸಾಂತ್ವನ ಹೇಳಿ ಪರಿಹಾರ ಕೊಡುವ ವ್ಯವಸ್ಥೆ ಮಾಡಿದ್ದಾರೆ. ನಡ್ಡಾ ಮತ್ತು ಬಿಜೆಪಿಯವರು ಎನ್ಸಿಆರ್ಬಿ ವರದಿ ತರಿಸಿಕೊಂಡು ನೋಡಲಿ. ಅವರ ಕಾಲದಲ್ಲಿ ರಾಜ್ಯದಲ್ಲಿ ಎಷ್ಟು ಜನ ಮಹಿಳೆಯರ ಮೇಲೆ ದೌರ್ಜನ್ಯ ಆಗಿತ್ತು ಎಂಬುದು ತಿಳಿಯುತ್ತದೆ ಎಂದು ತಿರುಗೇಟು ನೀಡಿದರು.
9 ವರ್ಷ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಉತ್ತರ ಪ್ರದೇಶದ ಬಿಜೆಪಿ ಶಾಸಕನಿಗೆ ನಿನ್ನೆಯಷ್ಟೇ 25 ವರ್ಷಗಳ ಜೈಲುವಾಸ ಶಿಕ್ಷೆಯಾಗಿದೆ. ಅದಕ್ಕೆ ಜೆ.ಪಿ. ನಡ್ಡಾ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಏನು ಹೇಳುತ್ತಾರೆ? ಹೆಣ್ಣು ಮಕ್ಕಳ ಮೇಲೆ ಯಾರೇ ದೌರ್ಜನ್ಯ ನಡೆಸಿದರೂ ಅವರಿಗೆ ಕಠಿಣ ಶಿಕ್ಷೆ ಆಗಲೇಬೇಕು ಎಂದು ಹೇಳಿದರು.