

ರಾಯಚೂರು: ಬಸವಣ್ಣ ಸ್ಥಾಪಿಸಿದ ಲಿಂಗಾಯತ ಧರ್ಮ ಅರಿವು ಮತ್ತು ಆಚಾರಗಳ ಸಂಗಮವಾಗಿದ್ದು, ಕನ್ನಡ ನಾಡು, ನುಡಿಗೆ ಮಾತ್ರವಲ್ಲದೆ ವಿಶ್ವಕ್ಕೆ ಮಹತ್ವದ ಸಂದೇಶ ನೀಡಿದ ಧರ್ಮವಾಗಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ರುದ್ರಪ್ಪ ಪಗಡದಿನ್ನಿ ಹೇಳಿದರು.
ಸ್ಥಳೀಯ ಬಸವ ಕೇಂದ್ರದಲ್ಲಿ ಬಸವ ಜಯಂತಿ ನಿಮಿತ್ತ ಭಾನುವಾರ ಸಂಜೆ ಏರ್ಪಡಿಸಿದ್ದ ಎರಡನೇ ದಿನದ ಚಿಂತನಾಗೋಷ್ಠಿಯಲ್ಲಿ ಮಾತನಾಡಿ, ಸಮಾಜದಲ್ಲಿದ್ದ ಅಸಮಾನತೆ, ಜಾತಿಯತೆ, ವೌಢ್ಯ, ಲಿಂಗತಾರತಮ್ಯ ಹೋಗಲಾಡಿಸುವ ನಿಟ್ಟಿನಲ್ಲಿ 12ನೇ ಶತಮಾನದಲ್ಲಿ ಲಿಂಗಾಯತ ಧರ್ಮ ಸ್ಥಾಪನೆ ಮಾಡಲಾಯಿತು ಎಂದರು.
ಶರಣರು ಬಾಹ್ಯವಾಗಿ ದೇವರನ್ನು ಹುಡುಕದೆ ದೇಹವೇ ದೇವಾಲಯ ಎಂದರು. ಧಾರ್ಮಿಕ ಶೋಷಣೆಯಿಂದ ಜನರನ್ನು ಮುಕ್ತಗೊಳಿಸುವ ನೆಲೆಯಲ್ಲಿ ಲಿಂಗಾಯತ ಧರ್ಮ ಜಾರಿಗೆ ಬಂದಿದೆ. ಈ ಧರ್ಮದಲ್ಲಿ ಗುರುವಿಗೆ, ಕಾಯಕಕ್ಕೆ, ಇಷ್ಠಲಿಂಗಕ್ಕೆ ಆದ್ಯತೆ ನೀಡಲಾಗಿದೆ. ಸೀಯರಿಗೆ ಸಮಾನ ಹಕ್ಕು ನೀಡಲಾಗಿದೆ.
ದೇವರನ್ನು ಮನುಷ್ಯರಿಂದ ಪ್ರತ್ಯೇಕಿಸದೆ ಮನುಷ್ಯರನ್ನೇ ದೇವರನ್ನಾಗಿ ಮಾಡುವ ಮಾನವೀಯ ನೆಲೆಗಟ್ಟಿನ ಮೇಲೆ ಧರ್ಮವನ್ನು ಕಟ್ಟಲಾಗಿದೆ. ಶರಣರ ಚಿಂತನೆಗಳನ್ನು ಮೈಗೂಡಿಸಿಕೊಂಡರೆ ಲೋಕದಲ್ಲಿ ಶೋಷಣೆಯಿರುವುದಿಲ್ಲ ಎಂದು ರುದ್ರಪ್ಪ ಪಗಡದಿನ್ನಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಬಸವ ಕೇಂದ್ರದ ಅಧ್ಯಕ್ಷ ರಾಚನಗೌಡ ಕೋಳೂರು, ಜಿಲ್ಲಾ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಶರಣಭೂಪಾಲ ನಾಡಗೌಡ, ಮುಖಂಡರಾದ ಅನ್ನಪೂರ್ಣ ಮೇಟಿ, ಡಾ.ಸರ್ವಮಂಗಳ ಸಕ್ರಿ, ಚಂದ್ರಕಲಾ ಪಾಟೀಲ್, ಪರ್ವತರೆಡ್ಡಿ, ಸಿ.ಬಿ.ಪಾಟೀಲ್, ರೇಖಾ ಪಾಟೀಲ್ ಉಪಸ್ಥಿತರಿದ್ದರು.