

ಹುಬ್ಬಳ್ಳಿ: ಲಿಂಗಾಯತರನ್ನು ತಮ್ಮ ಕೈಗೊಂಬೆಯಂತೆ ನಡೆಸಿಕೊಂಡ ಬಿಜೆಪಿಗೆ ಚುನಾವಣೆಯಲ್ಲಿ ಸಮಾಜದ ಜನರು ತಕ್ಕ ಬುದ್ಧಿ ಕಲಿಸಿ ಕಾಂಗ್ರೆಸ್ ಕಡೆ ವಾಲಿದ್ದಾರೆ. ಮುಂದೆ ಕಾಂಗ್ರೆಸ್ ಗೆ ಇಂತಹ ಸ್ಥಿತಿ ಬರಬಾರದೆಂದರೆ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವನ್ನು ಶೀಘ್ರ ಕೈಗೆತ್ತಿಕೊಳ್ಳಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾ ಮಹಾಪ್ರಧಾನ ಕಾರ್ಯದರ್ಶಿ, ಐಎಎಸ್ ಮಾಜಿ ಅಧಿಕಾರಿ ಡಾ. ಎಸ್.ಎಂ. ಜಾಮದಾರ ಆಗ್ರಹಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ ಕೇಂದ್ರ ಸರ್ಕಾರಕ್ಕೆ ಈ ಕುರಿತು ಪ್ರಸ್ತಾವನೆ ಕಳಿಸಲಾಗಿತ್ತು. ಆದರೆ, ಕೇಂದ್ರವು ಮೂರು ಅಂಶಗಳ ವಿವರಣೆ ಕೇಳಿ ವಾಪಸ್ ಕಳಿಸಿತ್ತು. ಹಿಂದಿನ ಸರ್ಕಾರ ಈ ವಿಷಯದಲ್ಲಿ ಯಾವುದೇ ಪ್ರಯತ್ನ ಮಾಡಲಿಲ್ಲ. ಹಾಗಾಗಿ ಇದೀಗ ಕಾಂಗ್ರೆಸ್ ಸರ್ಕಾರ ಸಮರ್ಪಕ ಉತ್ತರ ನೀಡಿ ಮತ್ತೆ ಪ್ರಸ್ತಾವನೆ ಕಳಿಸಬೇಕು.
ಲಿಂಗಾಯತವು ಪ್ರತ್ಯೇಕ ಧರ್ಮ ಎಂದು ಹಲವು ದಾಖಲೆಗಳು ಹೇಳುತ್ತವೆ. 100ಕ್ಕೂ ಹೆಚ್ಚು ಒಳಪಂಗಡಗಳನ್ನು ಒಳಗೊಂಡ ಸಮಾಜಕ್ಕೆ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ಕಾನೂನು ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರು ವೀರಶೈವ ಲಿಂಗಾಯತರ ಬೆಂಬಲ ತಮಗಿದೆ ಎಂದು ಹೇಳಿಕೊಳ್ಳುತ್ತಿರುವುದು ಸರಿಯಲ್ಲ. ಈ ಹಿಂದೆ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ ನಡೆದಾಗ ಶಿವಕುಮಾರ ನಮ್ಮ ಪರವಾಗಿ ನಿಂತು ಮಾತನಾಡಿಲ್ಲ. ಈಗ ಏಕಾಏಕಿ ಲಿಂಗಾಯತರ ಬಗ್ಗೆ ಮಾತನಾಡುವ ಹಕ್ಕು ಅವರಿಗೆ ಇಲ್ಲ. ಕೆಲವು ವೀರಶೈವ ಮಠಾಧೀಶರು ಅವರ ಜತೆ ಇರಬಹುದು. ಆದರೆ, ಲಿಂಗಾಯತರಲ್ಲ ಎಂದು ಹೇಳಿದರು.
ಪ್ರಸ್ತುತ ಸರ್ಕಾರದಲ್ಲಿ ಡಿ.ಕೆ. ಶಿವಕುಮಾರ ಮಾತ್ರ ಡಿಸಿಎಂ ಎಂದು ಹೇಳಲಾಗಿದೆ. ಲಿಂಗಾಯತ ಸಮಾಜದವರಿಗೂ ಅವಕಾಶ ನೀಡಬೇಕು. ಪ್ರಬಲ ಲಿಂಗಾಯತ ಸಮುದಾಯದ ಯಾವ ನಾಯಕರಿಂದಲೂ ಸಿಎಂ ಬೇಡಿಕೆ ಪ್ರಸ್ತಾಪ ಆಗಲಿಲ್ಲ. ಹಿಂದೆ ಯಡಿಯೂರಪ್ಪನವರನ್ನು ಸಿಎಂ ಮಾಡಿದಾಗ ಲಿಂಗಾಯತರು ಬಿಜೆಪಿ ಕಡೆ ವಾಲಿದ್ದರು. ಈಗ ಲಿಂಗಾಯತ ಸಮಾಜಕ್ಕೆ ಅನ್ಯಾಯವಾದ ಕಾರಣ ಕಾಂಗ್ರೆಸ್ ಗೆ ಮತ ಹಾಕಿದ್ದಾರೆ. ಶೇ. 29 ಶಾಸಕರು ಲಿಂಗಾಯತರು. 37ರಷ್ಟು ಎಸ್ ಸಿಎಸ್ಟಿ ಸಮುದಾಯದ ಶಾಸಕರೂ ಇದ್ದಾರೆ. ಇಂಥದರಲ್ಲಿ ಡಿಸಿಎಂ ಹುದ್ದೆ ಒಂದೇ ಇರಬೇಕು ಎಂದು ನಿರ್ಧರಿಸಿರುವುದು ಖಂಡನೀಯ ಎಂದರು.
ಧರ್ಮ ಒಡೆದರು ಎಂದು ಈ ಹಿಂದೆ ಕೂಗಾಡಿದವರು ವೀರಶೈವರೆ ಹೊರತು ಲಿಂಗಾಯತರಲ್ಲ. ಭಾರತ ಸರ್ಕಾರ ಲಿಂಗಾಯತ ಪ್ರತ್ಯೇಕ ಧರ್ಮದ ಬೇಡಿಕೆಗೆ ಮೂರು ಕಾರಣ ನೀಡಿ ಹಿಂದಿರುಗಿಸಿದೆ.
ಈಗ ಹೊಸದಾಗಿ ಬಂದಿರುವ ಕಾಂಗ್ರೆಸ್ ಸರ್ಕಾರಕ್ಕೆ ಬೇಕಾದ ದಾಖಲೆ ಕೊಡಲು ನಾವು ಸಿದ್ಧರಿದ್ದೇವೆ. ಅವುಗಳೊಂದಿಗೆ ಪುನರ್ ಪರಿಶೀಲನೆ ಅರ್ಜಿ ಸಲ್ಲಿಸಬೇಕು ಎಂದು ಮನವಿ ಮಾಡಿದರು.