

ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ತಹಸೀಲ್ದಾರ್‌ಗೆ ಮನವಿ
ಲಿಂಗಸುಗೂರು: ಕೃಷ್ಣಾ ನದಿ ತೀರದಲ್ಲಿರುವ ತಾಲೂಕಿನ ಯಳಗುಂದಿ ಗ್ರಾಮದಲ್ಲಿ ತಾಲೂಕು ಆಡಳಿತದಿಂದ ಶನಿವಾರ ಆಯೋಜಿಸಿದ್ದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಆರೋಗ್ಯ, ಶಿಕ್ಷಣ ಹಾಗೂ ಮೂಲ ಸೌಕರ್ಯ ಸಮಸ್ಯೆಗಳ ಕುರಿತ ಗ್ರಾಮಸ್ಥರು ಅಹವಾಲುಗಳ ಮಹಾಪುರವನ್ನೇ ಹೊತ್ತು ತಂದಿದ್ದರು.
ತಹಸೀಲ್ದಾರ್ ಬಲರಾಮ್ ಕಟ್ಟಿಮನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಭಾಗದ ಜನ ಕೆಲಸ, ಕಾರ್ಯಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆಯಬಾರದು ಎಂಬ ಕಾರಣಕ್ಕೆ ಸರ್ಕಾರ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ರೂಪಿಸಿದೆ. ಜಿಲ್ಲಾಡಳಿತ, ತಾಲೂಕು ಆಡಳಿತ ನಿಗದಿತ ಗ್ರಾಮಕ್ಕೆ ಆಗಮಿಸಿ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಲಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಗ್ರಾಮದಲ್ಲಿ 5 ನೇ ತರಗತಿವರೆಗಿರುವ ಸರ್ಕಾರಿ ಪ್ರಾಥಮಿಕ ಶಾಲೆಯನ್ನು 7 ನೇ ತರಗತಿವರೆಗೆ ಉನ್ನತೀಕರಿಸಬೇಕು. ಗ್ರಾಮಸ್ಥರಿಗೆ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿದ್ದು, ಆರೋಗ್ಯ ಉಪಕೇಂದ್ರ ಸ್ಥಾಪಿಸಬೇಕು. ಜಾನುವಾರುಗಳಿಗೆ ಕಾಲುಬಾಯಿ ರೋಗ ಕಾಡುತ್ತಿದ್ದು, ಪಶು ಆಸ್ಪತ್ರೆ ಸಿಬ್ಬಂದಿ ಸರಿಯಾಗಿ ಸ್ಪಂದಿಸುತ್ತಿಲ್ಲ. ಕೂಡಲೇ ಪಶು ಚಿಕಿತ್ಸಾ ಕೇಂದ್ರ ಮಂಜೂರು ಮಾಡಬೇಕು.
ನಡುಗಡ್ಡೆಗಳಾದ ಯಳಗುಂದಿ, ಕಡದರಗಡ್ಡಿ, ಹಂಚಿನಾಳ, ಯರಗೋಡಿ, ಶೀಲಹಳ್ಳಿ ಗ್ರಾಮಗಳ ಪೈಕಿ ಒಂದು ಗ್ರಾಮದಲ್ಲಿ ಸರಕಾರಿ ಪ್ರೌಢಶಾಲೆ ಮತ್ತು ವಸತಿ ನಿಲಯ ಆರಂಭಿಸಬೇಕು. ಗುರುಗುಂಟಾ ರೈತ ಸಂಪರ್ಕ ಕೇಂದ್ರ ಅಲ್ಲಿನ ರೈತರಿಗೆ ಮಾತ್ರ ಸೀಮಿತವಾಗಿದ್ದು, ಈ ಭಾಗದ ರೈತರಿಗೆ ಸೌಲಭ್ಯ ಸಿಗುತ್ತಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಯಳಗುಂದಿ ಕ್ರಾಸ್‌ನಿಂದ ಗ್ರಾಮದವರೆಗೆ ರಸ್ತೆ ಡಾಂಬರೀಕರಣ ಮಾಡಬೇಕು. ಗ್ರಾಮದಲ್ಲಿ ಸಿಸಿ ರಸ್ತೆ, ಕುಡಿವ ನೀರಿನ ಟ್ಯಾಂಕ್ ನಿರ್ಮಿಸಬೇಕು. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗಾಗಿ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸಬೇಕೆಂಬುದು ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕೆಂದು ಗ್ರಾಮಸ್ಥರು ತಹಸೀಲ್ದಾರಗೆ ಮನವಿ ಸಲ್ಲಿಸಿದರು.