

ಲಿಂಗಸುಗೂರು: ಗುಲ್ಬರ್ಗ ಮತ್ತು ರಾಯಚೂರು ವಿಶ್ವವಿದ್ಯಾಲಯಗಳಲ್ಲಿನ ತಾಂತ್ರಿಕ ಗೊಂದಲಗಳಿಂದ ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದ್ದು, ಶೈಕ್ಷಣಿಕ ಪ್ರಗತಿ ಹಿನ್ನೆಲೆಯಲ್ಲಿ ಸಮಸ್ಯೆಗಳನ್ನು ಶೀಘ್ರ ನಿವಾರಿಸಲು ಕ್ರಮ ಕೈಗೊಳ್ಳಬೇಕೆಂದು ನ್ಯಾಕ್ ತಂಡದ ಡಾ.ಶಿವಬಸಪ್ಪ ಮಾಲಿಪಾಟೀಲರ ಮುಂದೆ ಪ್ರಾಚಾರ್ಯ ಹಾಗೂ ವಿದ್ಯಾರ್ಥಿಗಳು ಮನವಿ ಮಾಡಿದರು.
ಪಟ್ಟಣದ ವೀರಶೈವ ವಿದ್ಯಾವರ್ಧಕ ಸಂಘದ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿಗೆ ನ್ಯಾಕ್ ತಂಡ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ವೇಳೆ ನ್ಯಾಕ್ ತಂಡದ ಡಾ.ಶಿವಬಸಪ್ಪ ಮಾಲಿಪಾಟೀಲ್ ಹಾಗೂ ಡಾ.ರಾಮಣ್ಣ ನೇತೃತ್ವದ ತಂಡ ಕಾಲೇಜಿನ ಮೂಲಸೌಕರ್ಯ, ಶಿಕ್ಷಣ, ಆಡಳಿತ ಮಂಡಳಿ, ಉಪನ್ಯಾಸಕರು, ಸಿಬ್ಬಂದಿ ವರ್ಗ, ವೇಳಾಪಟ್ಟಿ, ಉತ್ತಮ ಪರಿಸರ ಸೇರಿ ಸಮಗ್ರ ಮಾಹಿತಿ ಹೊಂದಿರುವ ಮೂಲಕ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಸಲಹೆ ನೀಡಿದರು.
ಪ್ರಾಚಾರ್ಯ ವೀರೇಶ ಪವಾರ್, ಉಪನ್ಯಾಸಕ, ಸಿಬ್ಬಂದಿ ವರ್ಗ, ಗುಲ್ಬರ್ಗ ಮತ್ತು ರಾಯಚೂರು ವಿಶ್ವವಿದ್ಯಾಲಯಗಳಲ್ಲಿನ ತಾಂತ್ರಿಕ ಗೊಂದಲದಿಂದ ವಿದ್ಯಾರ್ಥಿಗಳು ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ರಾಯಚೂರು ವಿವಿಯಲ್ಲಿ ಎರಡರಿಂದ ನಾಲ್ಕನೇ ಸೆಮಿಸ್ಟರ್ ಮತ್ತು ಗುಲ್ಬರ್ಗಾ ವಿವಿಯಲ್ಲಿ 5ರಿಂದ 6ನೇ ಸೆಮಿಸ್ಟರ್‌ಗಳು ಒಳಪಟ್ಟಿವೆ. ಆದರೆ 1ರಿಂದ 3 ನೇ ಸೆಮಿಸ್ಟರ್‌ಗಳ ವಿದ್ಯಾರ್ಥಿಗಳು ಎರಡೂ ವಿವಿಗಳಿಂದ ಸಮಸ್ಯೆ ಎದುರಿಸುವಂತಾಗಿದೆ ಎಂದು ತಿಳಿಸಿದರು.
ನ್ಯಾಕ್ ತಂಡ ಕಾಲೇಜು ಪ್ರಾಚಾರ್ಯರಿಂದ ಮಾಹಿತಿ ಪಡೆದು ಹೊರಬರುತ್ತಿದ್ದಂತೆ ವಿದ್ಯಾರ್ಥಿಗಳು ಮುತ್ತಿಗೆ ಹಾಕಿ ಅಳಲು ತೋಡಿಕೊಂಡರು. ಎನ್‌ಇಪಿ ಪ್ರಥಮ ಸೆಮಿಸ್ಟರ್ ಫಲಿತಾಂಶದಲ್ಲಿ ತೊಂದರೆ ಎದುರಿಸುವಂತಾಗಿದ್ದು, ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಫಲಿತಾಂಶ ಗೈರೆಂದು ನಮೂದಾಗಿದೆ.
ಡಿಎಸ್‌ಸಿ ಮಿಷನ್‌ಗಳ ತಿದ್ದುಪಡಿ ಆಗಿಲ್ಲ. ಹೆಸರು, ಜನ್ಮ ದಿನಾಂಕ, ಜಾತಿ, ಧರ್ಮದ ಬದಲಾವಣೆಯ ತೊಂದರೆ, ಫಲಿತಾಂಶ ಪ್ರಕಟವಾಗದೆ (ಎಸ್‌ಎಸ್‌ಪಿ) ವಿದ್ಯಾರ್ಥಿ ವೇತನಕ್ಕೆ ಅರ್ಜಿ ತುಂಬಲು ತೊಂದರೆಯಾಗಿದೆ. ಭರಿಸಿದ ಪರೀಕ್ಷಾ ಶುಲ್ಕದಲ್ಲಿ ವ್ಯತ್ಯಾಸ, ಎನ್‌ಇಪಿ ದ್ವಿತೀಯ ಸೆಮಿಸ್ಟರ್ ಫಲಿತಾಂಶ ಪ್ರಕಟಣೆ ಆಗದಿರುವುದು, ಪ್ರಥಮ ಮತ್ತು ದ್ವಿತೀಯ ಸೆಮಿಸ್ಟರ್ ಸಮಸ್ಯೆಗಳು ಪರಿಹಾರವಾಗದೆ ತೃತೀಯ ಸೆಮಿಸ್ಟರ್ ಪರೀಕ್ಷೆ ತಯಾರಿ ನಡೆದಿದೆ. ಇಂತಹ ಅನೇಕ ಸಮಸ್ಯೆಗಳಿಂದ ನಾವು ಪರದಾಡುವಂತಾಗಿದೆ. ಕೂಡಲೇ ಎಲ್ಲ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಮನವಿ ಮಾಡಿದರು.
ಸಿಬ್ಬಂದಿ ಅಮರೇಶ ನಾಯಕ, ವೆಂಕಟೇಶ ಮುತಾಲಿಕ್, ವೀರೇಶ ಗೌಡರ, ಕಣುಮೇಶ ಚಿತ್ತಾಪುರ, ಗುರುಪಾದಯ್ಯ, ಚನ್ನಪ್ಪ ರಾಠೋಡ್ ಸೇರಿದಂತೆ ಇತರರು ಇದ್ದರು.
ಸಮಸ್ಯೆಗಳ ಪರಿಹಾರಕ್ಕೆ ಹಲವು ಬಾರಿ ಪತ್ರ ವ್ಯವಹಾರ, ದೂರವಾಣಿ ಮೂಲಕ ಸಂಪರ್ಕ ಮತ್ತು ವಿವಿಗಳಿಗೆ ಖುದ್ದು ಭೇಟಿ ನೀಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಅಡ್ಡಿ ಉಂಟಾಗಿದೆ. ಕೂಡಲೇ ತಾವು ವಿವಿಯ ಕುಲಪತಿಗಳಿಗೆ ಸಮಸ್ಯೆಗಳನ್ನು ಪರಿಹರಿಸುವಂತೆ ಸೂಚಿಸಬೇಕು.| ವೀರೇಶ ಪವಾರ್, ವೀರಶೈವ ವಿದ್ಯಾವರ್ಧಕ ಸಂಘದ ಕಾಲೇಜಿನ ಪ್ರಾಚಾರ್ಯ, ಲಿಂಗಸುಗೂರು ಈಗಾಗಲೇ ಪ್ರಾಚಾರ್ಯರು ಮತ್ತು ಉಪನ್ಯಾಸಕರಿಂದ ಸಮಸ್ಯೆಗಳ ಪಟ್ಟಿ ಪಡೆಯಲಾಗಿದೆ. ಇನ್ನೆರಡು ದಿನಗಳಲ್ಲಿ ವಿವಿಗಳಿಗೆ ಭೇಟಿ ನೀಡಿ ಕುಲಪತಿಗಳ ಜತೆ ಚರ್ಚಿಸಿ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು.| ಡಾ.ಶಿವಬಸಪ್ಪ ಮಾಲಿಪಾಟೀಲ್, ನ್ಯಾಕ್ ಸಮಿತಿ ಸದಸ್ಯ