

ಲಿಂಗಸುಗೂರು: ತಾಲೂಕಿನಲ್ಲಿ ಸುಡುಬಿಸಿಲು ದಿನೇ ದಿನೆ ಹೆಚ್ಚುತ್ತಿದ್ದು, ಜನರು ನೆರಳು ಆಶ್ರಯಿಸುವುದರೊಂದಿಗೆ ಹಣ್ಣು, ತಂಪು ಪಾನೀಯಗಳ ಮೊರೆ ಹೋದರೂ ಹಿತ ಸಿಗದಂತಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ ಬರಗಾಲದಿಂದಾಗಿ ತಾಪಮಾನದಲ್ಲಿ ಹೆಚ್ಚಳ ಕಂಡುಬಂದಿದೆ. ಸೂರ್ಯನ ಪ್ರಖರವಾದ ಕಿರಣಗಳು ಜನ-ಜಾನುವಾರುರಗಳನ್ನು ಕಂಗೆಡಿಸಿವೆ. ಕಳೆದ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಸಕಾಲಕ್ಕೆ ಮಳೆ ಸುರಿಯದೆ ಬರಗಾಲ ಆವರಿಸಿ ಹಳ್ಳ-ಕೊಳ್ಳಗಳು ಬತ್ತಿವೆ. ಇದರಿಂದ ಅಂತರ್ಜಲ ಮಟ್ಟ ಕುಸಿತಗೊಂಡು ಉಷ್ಣಾಂಶ ರಣ ಭೀಕರವಾಗಿ ಗೋಚರಿಸುತ್ತಿದೆ.
ಬೆಳಗ್ಗೆ 11ರಿಂದ ಸಂಜೆ 4 ರವರೆಗೆ ಜನರು ಮನೆಯಿಂದ ಹೊರಗೆ ಬರಲು ಹಿಂಜರಿಯುವಂತಾಗಿದೆ. ಸಾರ್ವಜನಿಕರು ಟೋಪಿ, ಛತ್ರಿ ಬಳಸುತ್ತಿದ್ದಾರೆ. ಮನೆ, ಕಚೇರಿ, ವ್ಯಾಪಾರಿ ಮಳಿಗೆಗಳಲ್ಲಿ ಫ್ಯಾನ್, ಏರ್‌ಕೂಲರ್, ಏರ್ ಕಂಡಿಷನರ್ ಮೊರೆ ಹೋಗಿದ್ದಾರೆ. ಜನರು ಗಿಡ-ಮರಗಳ ನೆರಳನ್ನು ಆಶ್ರಯಿಸುತ್ತಿದ್ದಾರೆ.
ಬಿಸಿಲಿನ ಬೇಗೆ ನೀಗಿಸಿಕೊಳ್ಳಲು ಕಲ್ಲಂಗಡಿ, ಕರಬೂಜ ಹಣ್ಣುಗಳ ಸೇವನೆ, ಎಳನೀರು, ಕಬ್ಬಿನ ಹಾಲು, ನಾನಾ ಹಣ್ಣಿನ ಜ್ಯೂಸ್, ಶರಬತ್, ಮಜ್ಜಿಗೆ, ಲಸ್ಸಿ, ಐಸ್‌ಕ್ರೀಮ್ ಸವಿಯುತ್ತಿದ್ದಾರೆ.