ಭಕ್ತರಿಗಾಗಿ 400 ಕೊಠಡಿಗಳ ಯಾತ್ರಿ ನಿವಾಸ

Lingasugur Srishaila sri guruvandane
ಲಿಂಗಸುಗೂರಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮವನ್ನು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಉದ್ಘಾಟಿಸಿದರು. ದೇವರಭೂಪುರ ಬೃಹನ್ಮಠದ ಅಮರೇಶ್ವರ ಗುರು ಗಜದಂಡ ಶಿವಾಚಾರ್ಯರು, ಹೆಬ್ಬಾಳದ ನಾಗಭೂಷಣ ಶಿವಾಚಾರ್ಯರು, ಗಡ್ಡಿ ಮಠದ ಸಂಗಮೇಶ್ವರ ಶಿವಾಚಾರ್ಯರು ಇತರರಿದ್ದರು.
Published on

ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರ ಹೇಳಿಕೆ

ಲಿಂಗಸುಗೂರು : ಸತ್ಯ, ಶುದ್ಧ ಕಾಯಕದಿಂದ ಹಣ ಸಂಪಾದಿಸಬೇಕು. ಕಷ್ಟ-ಸುಖ ಗಳನ್ನು ಸಮನಾಗಿ ಸ್ವೀಕರಿಸಬೇಕು. ಇರುವುದರಲ್ಲಿಯೇ ಸಂತೃಪ್ತಿ ಯಿಂದ ಜೀವನ ನಡೆಸಬೇಕು ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.

ಪಟ್ಟಣದ ಮಾಜಿ ಶಾಸಕ ದಿ.ಸಂಗನಗೌಡ ಪಾಟೀಲರ ನಿವಾಸದಲ್ಲಿ ಮಂಗಳವಾರ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗುರು ಹಿರಿಯರ ಗೌರವಿಸುವುದು, ಎಲ್ಲರೊಂದಿಗೆ ಪ್ರೀತಿಯಿಂದ ಜೀವಿಸುವುದು ಧರ್ಮವಾಗಿದೆ. ದೇವರನ್ನು ಸಾಕ್ಷಾತ್ಕರಿಸಿಕೊಳ್ಳುವ ದಾರಿಯಲ್ಲಿ ಸಾಗುವುದೇ ನಿಜವಾದ ಧರ್ಮ. ಕುಟುಂಬದ ಮಹಿಳೆಯರು ಮೃದು ಭಾಷಿಣಿಯಾಗಿರಬೇಕು. ಧರ್ಮ ಪತ್ನಿಯನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ಗಂಡನಿರಬೇಕು. ಸಜ್ಜನ, ಸಂಪನ್ನರ ಸ್ನೇಹ ಬೆಳೆಸಬೇಕು. ದಾನ, ಧರ್ಮ ಮಾಡಬೇಕು. ಇವೆಲ್ಲವನ್ನು ಪಾಲಿಸಿದಾಗ ಮಾತ್ರ ಆದರ್ಶ ಗೃಹಸ್ಥ ಕುಟುಂಬವಾಗಿರಲು ಸಾಧ್ಯ ಎಂದು ತಿಳಿಸಿದರು.

ಆಂಧ್ರ ಸರ್ಕಾರ ಶ್ರೀಶೈಲ ಪೀಠಕ್ಕೆ 10 ಎಕರೆ ಜಾಗ ನೀಡಿದೆ. ಈ ಸ್ಥಳದಲ್ಲಿ ಶ್ರೀಶೈಲಕ್ಕೆ ಬರುವ ಭಕ್ತರಿಗಾಗಿ 400 ಕೊಠಡಿಗಳ ಯಾತ್ರಿ ನಿವಾಸ ನಿರ್ಮಿಸಲಾಗುವುದು. ವಿಶಾಲ ಮಂಟಪ, ವಸತಿ ಶಾಲೆ, ಸುಸಜ್ಜಿತ ಆಸ್ಪತ್ರೆ ನಿರ್ಮಿಸುವ ಸಂಕಲ್ಪ ಹೊಂದಲಾಗಿದೆ. ಇದರಿಂದ ಭಕ್ತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ದೇವರಭೂಪುರ ಬೃಹನ್ಮಠದ ಗುರು ಗಜದಂಡ ಶಿವಾಚಾರ್ಯರು, ಯರಡೋಣ ಸಿದ್ಧರಾಮೇಶ್ವರ ಮಠದ ಮುರುಘೇಂದ್ರ ಶಿವಯೋಗಿಗಳು, ಅಂಕಲಿಮಠದ ಫಕೀರೇಶ್ವರ ಸ್ವಾಮೀಜಿ, ಹೆಬ್ಬಾಳ ನಾಗಭೂಷಣ ಶಿವಾಚಾರ್ಯರು, ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಪುರ, ಸರೋಜಿನಿ ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net