

ಲಿಂಗಸುಗೂರು: ತಾಲೂಕಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಳೆದ ಹನ್ನೊಂದು ವರ್ಷಗಳಿಂದ ಸಮಾಜಮುಖಿ ಕಾರ್ಯ ಮಾಡುತ್ತಿದೆ ಎಂದು ತಹಸೀಲ್ದಾರ್ ಶಂಶಾಲಂ ಹೇಳಿದರು.
ಪಟ್ಟಣದ ಈಶ್ವರ ದೇವಸ್ಥಾನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ತಾಲೂಕು ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು. ಸಂಸ್ಥೆಯ ಅಧಿಕಾರಿ, ಸಿಬ್ಬಂದಿ ಯೋಜನೆಗಳು, ಸೌಲಭ್ಯಗಳ ಕುರಿತು ಆರ್ಥಿಕವಾಗಿ ಹಿಂದುಳಿದ ಮತ್ತು ದುರ್ಬಲ ವರ್ಗದ ಜನರಿಗೆ ತಲುಪಿಸಬೇಕಾಗಿದೆ ಎಂದರು ಹೇಳಿದರು.
ಸಂಸ್ಥೆ ಜಿಲ್ಲಾ ನಿರ್ದೇಶಕ ಮೋಹನ್ ನಾಯ್ಕ ಮಾತನಾಡಿ, ತಾಲೂಕಿನಲ್ಲಿ 20 ಸಾವಿರಕ್ಕೂ ಅಧಿಕ ಸದಸ್ಯರನ್ನು ಒಳಗೊಂಡ 2,477 ಸಂಘಗಳು ಕಾರ್ಯನಿರ್ವಹಿಸುತ್ತಿವೆ. ರೈತಾಪಿ ಕುಟುಂಬಗಳು ಪ್ರಗತಿನಿಧಿ ಪಡೆದು ಹೈನುಗಾರಿಕೆ, ಆಕಳು, ಮೇಕೆ, ಕುರಿ ಸಾಕಾಣಿಕೆ ಮತ್ತು ಕೊಟ್ಟಿಗೆ ರಚಿಸಿಕೊಂಡಿದ್ದಾರೆ. ತಾಲೂಕಿನ ಶಾಲೆಗಳಿಗೆ ಪೀಠೋಪಕರಣ ವಿತರಣೆ, ಶಾಲಾ ಕಟ್ಟಡ, ಸಮುದಾಯ ಭವನ, ದೇವಸ್ಥಾನ ಜೀರ್ಣೋದ್ಧಾರ, ಮದ್ಯ ವರ್ಜನ ಶಿಬಿರ, ಹಿಂದೂ ರುದ್ರಭೂಮಿ ಅಭಿವೃದ್ಧಿ, ಕೆರೆಗಳ ಹೂಳೆತ್ತುವುದು, ಶ್ರದ್ಧಾ ಕೇಂದ್ರ ಸ್ವಚ್ಛತೆ, ಮಾಸಾಶನ ಬುದ್ಧಿಮಾಂದ್ಯ, ಅಂಗವಿಕಲ ಮಕ್ಕಳಿಗೆ ಅಗತ್ಯ ಸಲಕರಣೆಗಳ ವಿತರಣೆ ಸೇರಿ ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತ ಬರುತ್ತಿದೆ ಎಂದು ಹೇಳಿದರು. ಐಡಿಬಿಐ ಶಾಖಾ ವ್ಯವಸ್ಥಾಪಕ ಪರಶುರಾಮ ರೊಟ್ಟಿಗವಾಡ, ಪ್ರಮುಖರಾದ ಶಶಿಕಲಾ ಭೋವಿ, ಎಂ.ಡಿ.ರಫೀ, ಶಾಂತಾ ಪಾಟೀಲ್ ಇತರರಿದ್ದರು ಇದ್ದರು.