

ಲಿಂಗಸುಗೂರು: ಪಟ್ಟಣದ ಈಶ್ವರ ದೇವಸ್ಥಾನದಲ್ಲಿ ತಾಲೂಕು ವೀರಶೈವ ಜಂಗಮ ಸಮುದಾಯದಿಂದ ವೀರಗೋತ್ರ ಪುರುಷ ಶ್ರೀ ವೀರಭದ್ರೇಶ್ವರ ದೇವರ ಜಯಂತ್ಯುತ್ಸವ ನಿಮಿತ್ತ ವೀರಭದ್ರ ದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಮಂಗಳವಾರ ಆಚರಿಸಲಾಯಿತು.
ಜಂಗಮ ಸಮುದಾಯದ ತಾಲೂಕು ಅಧ್ಯಕ್ಷ ಪ್ರಭುಸ್ವಾಮಿ ಅತ್ತನೂರು ಮಾತನಾಡಿ, ವೀರಶೈವ-ಲಿಂಗಾಯತ ಧರ್ಮದ ವೀರ, ನಂದಿ, ಭೃಂಗಿ, ವೃಷಭ, ಸ್ಕಂದ ಎಂಬ ಪಂಚಗೋತ್ರ ಪುರುಷರಲ್ಲಿ ವೀರಭದ್ರ ಸ್ವಾಮಿಯೇ ಪ್ರಥಮ ಪುರುಷನಾಗಿದ್ದು, ಪ್ರಜಾಪತಿ ದಕ್ಷನ ಸಂಹಾರಕ್ಕಾಗಿ ಶಿವನ ಅಂಶದಿಂದ ಅವತರಿಸಿದ ಶ್ರೀ ವೀರಭದ್ರ ಸ್ವಾಮಿಯು, ಶಿವ ಭಕ್ತರನ್ನು ಸಂರಕ್ಷಿಸುವ ಮತ್ತು ಅಧರ್ಮ ಮಾರ್ಗದಲ್ಲಿ ನಡೆಯುವವರಿಗೆ ಧರ್ಮ ಮಾರ್ಗದಲ್ಲಿ ಮುನ್ನಡೆಸುತ್ತಿದ್ದಾನೆ. ಪ್ರತಿವರ್ಷ ಭಾದ್ರಪದ ಮಾಸದ ಮೊದಲ ಮಂಗಳವಾರದಂದು ಮಂದಿರ, ಮಠ-ಮಾನ್ಯಗಳಲ್ಲಿ ಮಾತ್ರ ಶ್ರೀ ವೀರಭದ್ರಸ್ವಾಮಿಯ ಜಯಂತಿ ಆಚರಿಸುತ್ತ ಬರಲಾಗುತ್ತಿತ್ತು. ವೀರಶೈವ ಮಠಾಧೀಶರು ಮತ್ತು ವೀರಶೈವ-ಲಿಂಗಾಯತ ಸಂಘಟನೆಗಳು ಜಯಂತಿಯನ್ನು ಸಾರ್ವತ್ರಿಕವಾಗಿ ಆಚರಿಸಲು ನಿರ್ಧರಿಸಿದ್ದು, ಜಂಗಮ ಸಮುದಾಯದಿಂದ ಕರೊನಾ ನಿಮಿತ್ತ ಸರಳವಾಗಿ ಆಚರಿಸಲಾಯಿತು ಎಂದರು.
ಪತ್ರಕರ್ತ ಅಮರೇಶಸ್ವಾಮಿ ಬಲ್ಲಟಗಿ ಮಾತನಾಡಿದರು. ಮುಖಂಡರಾದ ರಮೇಶ ಶಾಸ್ತ್ರಿ, ನಾಗಯ್ಯ ಸೊಪ್ಪಿಮಠ, ಅಮರೇಶ ಗಂಭೀರಮಠ, ಮಲ್ಲಿಕಾರ್ಜುನಯ್ಯ, ಚಂದ್ರಶೇಖರ ಶಾಸ್ತ್ರಿ, ಶರಣಯ್ಯ ಕರಡಕಲ್, ವೀರಭದ್ರಯ್ಯ ವಸ್ತ್ರದ್, ಶರಣಯ್ಯ ದಾಸೋಹಮಠ, ಚನ್ನಬಸವ ಹಿರೇಮಠ, ಚಂದ್ರಶೇಖರ ಹಿರೇಮಠ, ನಾಗರಾಜ ಕಳಸದಗುಡಿ, ವೀರಭದ್ರಯ್ಯ ಗುಂತಗೋಳ, ಸಂತೋಷ ಸೊಪ್ಪಿಮಠ, ರಮೇಶ ಗೊರೇಬಾಳ ಇದ್ದರು.