

ಲಿಂಗಸುಗೂರು: ತಾಲೂಕಿನಲ್ಲಿ ನಾನಾ ಸಮಸ್ಯೆಗಳಿಂದಾಗಿ ಸಾರ್ವಜನಿಕರು ಸಂಕಷ್ಟ ಎದುರಿಸುವಂತಾಗಿದ್ದು, ಕೂಡಲೇ ಸಮಸ್ಯೆಗಳನ್ನು ಇತ್ಯರ್ಥ ಪಡಿಸಬೇಕೆಂದು ಒತ್ತಾಯಿಸಿ ಎಸಿ ಕಚೇರಿ ಎಫ್‌ಡಿಎ ಅಮರೇಶಗೆ ಕರ್ನಾಟಕ ಪ್ರಾಂತ ರೈತಸಂಘದಿಂದ ಬುಧವಾರ ಮನವಿ ಸಲ್ಲಿಸಲಾಯಿತು.
ಪಟ್ಟಣದಲ್ಲಿ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಹೆಚ್ಚುವರಿ ಭೂಮಿ ಒದಗಿಸಿ ಶೀಘ್ರ ಆಸ್ಪತ್ರೆ ಕಾಮಗಾರಿ ಆರಂಭಿಸಬೇಕು. ಮುದಗಲ್‌ನಲ್ಲಿ ನಿತ್ಯ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು. ಮುದಗಲ್ ಸಂತೆ ಬಜಾರ್ ನಲ್ಲಿ ಸಾರ್ವಜನಿಕ ಶೌಚಗೃಹ ನಿರ್ಮಿಸಬೇಕು. ಕಿಲ್ಲಾ ದುರಸ್ತಿ, ಹಳೆಯಪೇಟೆ ಚರಂಡಿ ಸಮಸ್ಯೆ ನಿವಾರಿಸಬೇಕು.
ಉಳುಮೇಶ್ವರ, ನಾಗಲಾಪುರ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಬೇಕು. ವಿದ್ಯಾರ್ಥಿಗಳ ಶಿಷ್ಯವೇತನ ಅರ್ಜಿ ಹಾಕುವ ಕಾಲಾವಕಾಶ ವಿಸ್ತರಿಸಬೇಕು. ಕೋಠಾ ಗ್ರಾಮದಲ್ಲಿ ಮೆಟ್ರಿಕ್ ಪೂರ್ವ ವಸತಿ ನಿಲಯ ನಿರ್ಮಾಣ ಸೇರಿ ಹಲವು ಸಮಸ್ಯೆಗಳನ್ನು ಪರಿಹರಿಸಬೇಕೆಂದು ಒತ್ತಾಯಿಸಲಾಯಿತು.