

ಕಾಲೇಜು ಕಟ್ಟಡ ಉದ್ಘಾಟನಾ ಸಮಾರಂಭ
ಲಿಂಗಸುಗೂರು: ಶತಮಾನಗಳಿಂದ ವೀರಶೈವ-ಲಿಂಗಾಯತ ಮಠಗಳು, ಸಂಘ-ಸಂಸ್ಥೆಗಳು ಜಾತಿ ಬೇಧವಿಲ್ಲದೆ ಬಡ ಮಕ್ಕಳಿಗೆ ವಸತಿ, ಪ್ರಸಾದದ ಜತೆ ಶೈಕ್ಷಣಿಕ ಪ್ರಗತಿಗೆ ನೀಡಿದ ಕೊಡುಗೆ ಅಪಾರ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಪಟ್ಟಣದ ವೀರಶೈವ ವಿದ್ಯಾವರ್ಧಕ ಸಂಘದ ಶ್ರೀಮತಿ ಮಹಾಂತಮ್ಮ ಲಿಂಗನಗೌಡ ಬಯ್ಯಪುರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ನೂತನ ಕಟ್ಟಡ ಉದ್ಘಾಟನಾ ಸಮಾರಂಭವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣದ ಮಹತ್ವ ಬಹುದೊಡ್ಡದು. ರಾಜ ಪ್ರಭುತ್ವ ವ್ಯವಸ್ಥೆಯಲ್ಲಿ ಶಾಲೆ, ಕೆರೆ ಸ್ಥಾಪಿಸಿ ಕೃಷಿ ಮತ್ತು ಶಿಕ್ಷಣಕ್ಕೆ ಒತ್ತು ನೀಡಿರುವುದು ದೂರದೃಷ್ಟಿಯ ಕೆಲಸವಾಗಿದೆ. ಜ್ಞಾನಕ್ಕೆ ಶಿಕ್ಷಣವೇ ಸ್ಪೂರ್ತಿ ಎಂದರಿತ ವೀರಶೈವ ಮಠಗಳು ಅಂದು ಶೋಷಿತ ಸಮುದಾಯಗಳ ಮಕ್ಕಳಿಗೆ ಶಿಕ್ಷಣ, ಪ್ರಸಾದ, ವಸತಿ ವ್ಯವಸ್ಥೆ ಕಲ್ಪಿಸಿ ಗುರುಕುಲ ಸ್ಥಾಪಿಸದಿದ್ದರೆ ಇಂದು ರಾಜ್ಯ ಬಿಹಾರ, ಉತ್ತರ ಪ್ರದೇಶದಂತೆ ಇರುತ್ತಿತ್ತು. ಆ ಕಾರಣ ಕತ್ತಲೆಯಿಂದ ಬೆಳಕಿನತ್ತ ತಂದವರನ್ನು ಸ್ಮರಿಸಲೇಬೇಕು. ವೀರಶೈವ ಲಿಂಗಾಯತ ಸಮುದಾಯ ಹಲವು ದಶಕಗಳ ಹಿಂದೆ ವಸತಿ ನಿಲಯ ಸ್ಥಾಪಿಸಿ ಕ್ರಮೇಣ ಶಾಲೆ, ಕಾಲೇಜು ಆರಂಭಿಸಿ ಇಂದು ಬಹುದೊಡ್ಡ ಶಿಕ್ಷಣ ಸಂಸ್ಥೆ ಕಟ್ಟಿರುವ ವಿವಿ ಸಂಘವನ್ನು ಶ್ಲಾಘಿಸಿದರು.
ಮಗುವಿಗೆ ಸ್ಪೂರ್ತಿದಾಯಕ ಶಿಕ್ಷಣ ದೊರೆಯಬೇಕಾದರೆ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದ್ದು, ಅರಿವೇ ಗುರು ಎಂಬಂತೆ ಶಿಕ್ಷಕರು ಬರೀ ಪಾಠ-ಪ್ರವಚನ ನೀಡದೆ ಮಕ್ಕಳಿಗೆ ಅರ್ಥವಾಗುವಂತೆ ಗುಣಮಟ್ಟದ ಶಿಕ್ಷಣ ನೀಡಬೇಕು. ಶಿಕ್ಷಣ ಯಾರ ಸೊತ್ತೂ ಅಲ್ಲ. ಬಡವ-ಬಲ್ಲಿದ ಎಂಬ ಭೇದ ತೋರುವುದಿಲ್ಲ. ಸರ್.ಎಂ.ವಿಶ್ವೇಶ್ವರಯ್ಯ, ನರಸಿಂಹಯ್ಯ, ಎಪಿಜೆ ಅಬ್ದುಲ್ ಕಲಾಂರಂಥವರು ಬಡತನದ ಮಧ್ಯೆಯೂ ಉನ್ನತ ಸಾಧನೆ ಮಾಡಿದವರು. ಇವರು ಇಂದಿನ ಮಕ್ಕಳಿಗೆ ಮಾದರಿಯಾಗಬೇಕು ಎಂದರು.
ಸ್ವಾಭಿಮಾನದ ಬದುಕಿನ ಜತೆಗೆ ಕೌಶಲ ಅಭಿವೃದ್ಧಿ ಹೊಂದಲು ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ. ಶೈಕ್ಷಣಿಕ ಪ್ರಗತಿ ಸಾಧಿಸಿ ಉಜ್ವಲ ಭವಿಷ್ಯ ರೂಪಿಸಿಕೊಂಡ ವ್ಯಕ್ತಿಗಳು ಸಮಾಜದ ಋಣ ತೀರಿಸದೆ ಪಾತಕಿಗಳಾಗದಿರಿ. ಶಿಕ್ಷಣವನ್ನು ಗಂಭೀರವಾಗಿ ತೆಗೆದುಕೊಂಡು ಗುರಿ ಸಾಧಿಸುವತ್ತ ಗಮನ ಹರಿಸಬೇಕು. ಸುಸಂಸ್ಕೃತ ಮಕ್ಕಳನ್ನಾಗಿಸಲು ಪಾಲಕರು ನಿಗಾವಹಿಸಬೇಕೆಂದು ಹೇಳಿದರು.
ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಜನ ಶಿಕ್ಷಣದಿಂದ ವಂಚಿತರಾಗಿದ್ದು, ನಿಜಾಮರ ಆಳ್ವಿಕೆಯಲ್ಲಿ ಶಿಕ್ಷಣವೆಂದರೆ ಕಬ್ಬಿಣದ ಕಡಲೆಯಂತಾಗಿತ್ತು. ಇದೀಗ ವೀವಿ ಸಂಘವು ಶಿಕ್ಷಣಕ್ಕೆ ಆದ್ಯತೆ ನೀಡಿದ್ದರಿಂದ ಎಸ್‌ಸಿ, ಎಸ್‌ಟಿ ಮಕ್ಕಳು ಕೂಡ ಸಾಕಷ್ಟು ಸಂಖ್ಯೆಯಲ್ಲಿ ಶಿಕ್ಷಣ ಪಡೆದು ಉನ್ನತ ಹುದ್ದೆ ಹೊಂದುತ್ತಿದ್ದು, ಸರ್ಕಾರದ ಆಶಯವೂ ಇದೆ ಆಗಿದೆ ಎಂದರು.
ಶಾಸಕ ಡಿ.ಎಸ್.ಹೂಲಗೇರಿ, ಎಂಎಲ್‌ಸಿ ಬಸವರಾಜ ಪಾಟೀಲ್ ಇಟಗಿ, ಮುಖಂಡರಾದ ಶರಣಪ್ಪ ಮೇಟಿ, ಭೂಪನಗೌಡ ಪಾಟೀಲ್, ಬಸವಂತರಾಯ ಕುರಿ, ಮಲ್ಲೇಶಗೌಡ ಮಟ್ಟೂರು, ಶರಣಬಸಪ್ಪ ಗುಡದನಾಳ, ಡಾ.ಶರಣಗೌಡ ಪಾಟೀಲ್, ಸಿದ್ಧನಗೌಡ ಪಾಟೀಲ್, ಮಲ್ಲಯ್ಯಸ್ವಾಮಿ ಹಿರೇಮಠ, ಸುರೇಶರಡ್ಡಿ ಇತರರು ಇದ್ದರು.