

ಲಿಂಗಸುಗೂರು: ನಾರಾಯಣಪುರದ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 19 ಕ್ರಸ್ಟ್‌ಗೇಟ್‌ಗಳ ಮೂಲಕ 1,38,658 ಕ್ಯೂಸೆಕ್ ನೀರನ್ನು ಸೋಮವಾರ ಬಿಡಲಾಗಿದೆ.
ನದಿಯಲ್ಲಿ ಪ್ರವಾಹ ತಗ್ಗಿದ್ದರಿಂದ ನಡುಗಡ್ಡೆ ಹಳ್ಳಿಗಳಿಗೆ ಸಂಪರ್ಕಿಸುವ ಶೀಲಹಳ್ಳಿ ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ. ಆದರೆ ನಡುಗಡ್ಡೆ ಪ್ರದೇಶಗಳಾದ ಮ್ಯಾದರಗಡ್ಡಿ, ಕರಕಲಗಡ್ಡಿ, ವೆಂಕಮ್ಮನಗಡ್ಡಿ ನಿವಾಸಿಗಳು ಬಾಹ್ಯ ಸಂಪಕ ಕಳೆದುಕೊಂಡಿದ್ದಾರೆ. ಆಲಮಟ್ಟಿ ಅಣೆಕಟ್ಟೆಯಿಂದ ಬಸವಸಾಗರ ಜಲಾಶಯಕ್ಕೆ 1.40 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. 1,32,586 ಕ್ಯೂಸೆಕ್ ನೀರು ಕ್ರಸ್ಟ್‌ಗೇಟುಗಳ ಮೂಲಕ ನದಿಗೆ ನೇರವಾಗಿ ಮತ್ತು ಮುರುಡೇಶ್ವರ ವಿದ್ಯುತ್ ಉತ್ಪಾದನಾ ಘಟಕದ ಮೂಲಕ 6 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಬಸವಸಾಗರ ಜಲಾಶಯದಲ್ಲಿ ಗರಿಷ್ಠ ಸಂಗ್ರಹ ಸಾಮರ್ಥ್ಯ 492.252 ಮೀ. (33 ಟಿಎಂಸಿ) ಇದ್ದು, ಸೋಮವಾರದ ನೀರಿನ ಮಟ್ಟ 491.07 ಮೀ. (28.12 ಟಿಎಂಸಿ) ಇತ್ತು.
ರೈತರಲ್ಲಿ ಮೂಡಿದ ನೆಮ್ಮದಿ
ದೇವದುರ್ಗ: ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಇಳಿಕೆಯಾಗಿರುವುದರಿಂದ ಮುಳುಗಡೆಯಾಗಿದ್ದ ಹೂವಿನಹೆಡಗಿ ಶ್ರೀಗಡ್ಡೆಗೂಳಿ ಬಸವೇಶ್ವರ ದೇವಸ್ಥಾನದ ಗೋಪುರ ಕಾಣಿಸುತ್ತಿದೆ. ಕೊಪ್ಪರದ ಲಕ್ಷ್ಮೀ ನರಸಿಂಹ ಹಾಗೂ ಗೂಗಲ್‌ನ ಶ್ರೀಅಲ್ಲಮಪ್ರಭು ದೇವಸ್ಥಾನ ಸಮೀಪದ ಬಂದಿದ್ದ ನೀರು ಇಳಿಕೆಯಾಗಿದೆ. ನದಿಯಲ್ಲಿ ನೀರಿನ ಪ್ರಮಾಣ ಇಳಿಕೆಯಾಗಿರುವುದರಿಂದ ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.