ಸಂಸದರ ಜಾತಿ ಗೊಂದಲ ರಾಜಕೀಯ ಷಡ್ಯಂತ್ರ

Untitled design (52)
Published on

ಲಿಂಗಸುಗೂರು: ರಾಯಚೂರು ಲೋಕಸಭಾ ಕ್ಷೇತ್ರದ ಸಂಸದ ರಾಜಾ ಅಮರೇಶ್ವರ ನಾಯಕ ಅವರು ಪರಿಶಿಷ್ಟ ಜಾತಿಗೆ ಸೇರಿದವರಲ್ಲವೆಂದು ಗೊಂದಲ ಸೃಷ್ಟಿಸಿರುವುದು ಕಾಂಗ್ರೆಸ್ ಪಕ್ಷದ ರಾಜಕೀಯ ಷಡ್ಯಂತ್ರ ಎಂದು ವಾಲ್ಮೀಕಿ ನಾಯಕ ಸಂಘದ ತಾಲೂಕಾಧ್ಯಕ್ಷ ದ್ಯಾಮಣ್ಣ ನಾಯಕ ದೂರಿದರು.

ಪಟ್ಟಣದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ರಾಜಾ ಅಮರೇಶ್ವರ ನಾಯಕ ಪರಿಶಿಷ್ಟ ಜಾತಿ ಕ್ಷೇತ್ರದಿಂದ ಈ ಹಿಂದೆ ಶಾಸಕರಾಗಿ, ಸಚಿವರಾಗಿ, ಸಂಸದರಾಗಿ ಅನೇಕ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಅವರ ಅಭಿವೃದ್ಧಿ ಕಾರ್ಯ ಸಹಿಸದ ಕೆಲವರು ಚುನಾವಣೆ ಬಂದಾಗಲೊಮ್ಮೆ ಜಾತಿ ಪ್ರಮಾಣ ಪತ್ರದ ವಿಷಯ ತರಲಾಗುತ್ತಿದೆ. ಇದು ಸಂಸದರ ತೇಜೋವಧೆ ಮಾಡುವ ಹುನ್ನಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕ್ಷತ್ರಿಯ ಎಂಬ ಪದವು ಸ್ವಾತಂತ್ರ್ಯ ಪೂರ್ವ ಆಳ್ವಿಕೆ ನಡೆಸುವ ರಾಜ ಮನೆತನ ಮತ್ತು ಪಾಳೆಗಾರರಿಗೆ ಕರೆಯಲಾಗುತ್ತಿತ್ತು. ರಾಜಾ ಅಮರೇಶ್ವರ ನಾಯಕರು ಕೂಡ ರಾಜ ಮನೆತನದಿಂದ ಬಂದಿದ್ದಾರೆ. ವಾಲ್ಮೀಕಿ ನಾಯಕ ಸಮುದಾಯ ಅವರನ್ನು ಗುರುಗಳೆಂದು ಗೌರವಿಸುತ್ತದೆ. ಮೀಸಲಾತಿ ಜಾರಿಯಿಂದ ವಾಲ್ಮೀಕಿ ನಾಯಕ ಸಮುದಾಯ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಯಾಗಿದೆ ಎಂದರು.

ಅಮರೇಶ್ವರ ನಾಯಕ ಹಾಗೂ ಸುರಪೂರ ರಾಜ ಮನೆತನಗಳು ಕೂಡ ಪರಿಶಿಷ್ಟ ಪಂಗಡಕ್ಕೆ ಒಳಪಟ್ಟಿರುತ್ತವೆ. ಅಮರೇಶ್ವರ ನಾಯಕ ಅವರು ಪರಿಶಿಷ್ಟ ಪಂಗಡಕ್ಕೆ ಒಳಪಡುವುದಿಲ್ಲವೆಂದು ದೂರು ನೀಡಿದ ಮಾನ್ವಿಯ ನರಸಿಂಹ ನಾಯಕರಿಗೆ ಮಾಹಿತಿ ಕೊರತೆಯಿದೆ. ಇದು ಕಾಂಗ್ರೆಸ್ ಪಕ್ಷದ ಕುತಂತ್ರವಾಗಿದೆ ಎಂದು ಆರೋಪಿಸಿದರು.
ಪ್ರಮುಖರಾದ ನಂದೇಶ ನಾಯಕ, ಪೋಷಣ್ಣ ನಾಯಕ, ಹನುಮನಗೌಡ, ಮಾನಪ್ಪ ನಾಯಕ, ದುರುಗಣ್ಣ ನಾಯಕ, ಹನುಮೇಶ ನಾಯಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net