ಶೇ.75 ರಿಸರ್ವೇಶನ್ ಕಲ್ಪಿಸಲಿ

19LNG02
Published on

ಲಿಂಗಸುಗೂರು: ರಾಜ್ಯದ ಖಾಸಗಿ ಮತ್ತು ಅರೆಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಶೇ.75 ಉದ್ಯೋಗ ಮೀಸಲಾತಿ ಕಾಯ್ದೆ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಕಾರ್ಯಕರ್ತರು ಎಸಿ ಅವಿನಾಶ ಶಿಂಧೆಗೆ ಶುಕ್ರವಾರ ಮನವಿ ಸಲ್ಲಿಸಿದರು.

ರಾಜ್ಯದ ಕೈಗಾರಿಕೆ ಮತ್ತು ಕಾರ್ಖಾನೆ ಸೇರಿ ಇತರ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವ ಕಾರ್ಮಿಕ ಇಲಾಖೆಯ ವಿಧೇಯಕವನ್ನು ಅಧಿವೇಶನದಲ್ಲಿ ಮಂಡನೆ ಮಾಡಿ ಒಪ್ಪಿಗೆ ಪಡೆಯಲಾಗಿದೆ. ಈ ಪ್ರಕಾರ ಸಿ ಮತ್ತು ಡಿ ದರ್ಜೆ ಉದ್ಯೋಗಗಳಲ್ಲಿ ಶೇ 100 ಸ್ಥಳೀಯರಿಗೆ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.

ಮೀಸಲಾತಿ ನಿರ್ವಹಣೆಗೆ ನೋಡಲ್ ಏಜೆನ್ಸಿ ಸ್ಥಾಪಿಸಬೇಕು. ಸೂಪರ್‌ವೈಸರ್, ವ್ಯವಸ್ಥಾಪಕ, ಟೆಕ್ನಿಕಲ್, ಸೇರಿ ಆಡಳಿತಾತ್ಮಕ ಉದ್ಯೋಗಗಳಲ್ಲಿ ಶೇ.50 ಹಾಗೂ ಗುಮಾಸ್ತ, ಕೌಶಲಾಧಾರಿತ, ಕೌಶಲ ರಹಿತ, ಅರೆ ಕೌಶಲ ಗುತ್ತಿಗೆಯಂತಹ ಆಡಳಿತಾತ್ಮಕವಲ್ಲದ ಹುದ್ದೆಗಳಿಗೆ ಶೇ 75 ಮೀಸಲಿಡಬೇಕು. ಈ ಕುರಿತ ವಿಧೇಯಕಕ್ಕೆ ತಾತ್ಕಾಲಿಕ ತಡೆ ನೀಡಿರುವುದು ವಿಷಾದನೀಯ ಎಂದರು.

ಕೆಲ ಖಾಸಗಿ ಕಂಪನಿಗಳ ಮಾಲೀಕರು ರಾಜ್ಯದ ಮೂಲ ಸೌಕರ್ಯ ಪಡೆದು ಕನ್ನಡಿಗರಿಗೆ ಉದ್ಯೋಗ ನೀಡುವಲ್ಲಿ ತಾರತಮ್ಯ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಯಾವುದೇ ಒತ್ತಾಯಕ್ಕೆ ಮಣಿಯದೆ ಕನ್ನಡಿಗರಿಗೆ ಶೇ 75 ಉದ್ಯೋಗ ಮೀಸಲಾತಿ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net