

ಲಿಂಗಸುಗೂರು: ಭಾರತೀಯ ಸನಾತನ ಪರಂಪರೆ, ಸಂಸ್ಕೃತಿ, ಆಚರಣೆ ಜತೆಗೆ ವಿವಿಧತೆಯಲ್ಲಿ ಏಕತೆ ಮೆರೆಯುತ್ತಿರುವ ಹಿಂದುಗಳು ಜಾತಿ-ಮತ, ಪಂಥ, ಭೇದ-ಭಾವ, ವೈಷಮ್ಯಗಳನ್ನು ತೊರೆದು ಒಗ್ಗೂಡದಿದ್ದರೆ ಮುಂದಿನ ದಿನಗಳಲ್ಲಿ ಉಳಿಗಾಲ ಇಲ್ಲವೆಂದು ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಶ್ರೀರಾಮಸೇನೆಯಿಂದ ಭಾನುವಾರ ಹಮ್ಮಿಕೊಂಡಿದ್ದ ರಾಮನವಮಿ ಮತ್ತು ಹಿಂದು ಸಾಮ್ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಶತಮಾನದಿಂದ ಸನಾತನ ಹಿಂದು ಧರ್ಮ ಮತ್ತು ದೇಶ ಭಕ್ತಿ ಮೆರೆಯುತ್ತ ಬರುತ್ತಿರುವ ಬಹುದೊಡ್ಡ ಸಂಘಟನೆಯಾದ ಆರ್‌ಎಸ್‌ಎಸ್ ಮಾರ್ಗದರ್ಶನದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಶ್ರೀರಾಮಸೇನೆ ಹಿಂದುಗಳ ಮತ್ತು ದೇಶ ರಕ್ಷಣೆ ಕಾರ್ಯದಲ್ಲಿ ತೊಡಗಿದೆ. ಮನುಷ್ಯನ ಬದುಕು ಧೈರ್ಯ, ಶೌರ್ಯ, ಕ್ಷಾತ್ರದಿಂದ ದೇಶಕ್ಕಾಗಿ ಮತ್ತು ಸಮಾಜಕ್ಕಾಗಿ ಬದುಕಬೇಕೆಂದು ಆರ್‌ಎಸ್‌ಎಸ್ ಕಲಿಸಿಕೊಟ್ಟಿತು ಎಂದರು.
ಆರ್‌ಎಸ್‌ಎಸ್, ಬಜರಂಗದಳ, ಎಬಿವಿಪಿ, ವಿಶ್ವ ಹಿಂದು ಪರಿಷತ್ ಸೇರಿದಂತೆ ಅನೇಕ ಸಂಘಟನೆಗಳು ಹಿಂದುಗಳು ನಾವೆಲ್ಲ ಒಂದು ಮತ್ತು ಭಾರತೀಯ ಸನಾತನ ಪರಂಪರೆ, ಸಂಸ್ಕೃತಿ, ಆಚರಣೆಗಳು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಮಠ-ಮಾನ್ಯಗಳು, ದೇಗುಲಗಳು, ಮಹಿಳೆಯರು, ಗೋವುಗಳ ಸಂರಕ್ಷಣೆಗಾಗಿ ಶ್ರಮಿಸುತ್ತಿವೆ. ಹಿಂದುತ್ವದ ಉಳಿವಿಗಾಗಿ ಹಿಂದು ಕಾರ್ಯಕರ್ತರು ಪ್ರಾಣ ತೆತ್ತಿದ್ದಾರೆ ಮತ್ತು ಹತ್ಯೆಗೀಡಾಗಿದ್ದಾರೆ. ಹಿಂದುತ್ವದ ಹೆಸರೇಳಿ ಅಧಿಕಾರಕ್ಕೆ ಬರುವ ಪಕ್ಷಗಳು ಹಿಂದು ಕಾರ್ಯಕರ್ತರ ರಕ್ಷಣೆಗೆ ಬಾರದೆ ಪ್ರಕರಣ ದಾಖಲಿಸುತ್ತಿರುವುದು ಖೇದಕರ ಸಂಗತಿ. ಇನ್ನಾದರೂ ಎಚ್ಚೆತ್ತುಕೊಂಡು ಹಿಂದುಗಳೆಲ್ಲ ಒಗ್ಗೂಡಬೇಕಿದೆ ಎಂದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಕಳೆದ ಐದುನೂರು ವರ್ಷಗಳಿಂದ ಸಾಧು ಸಂತರು, ಕರಸೇವಕರ ಸಂಘರ್ಷ, ಹೋರಾಟ, ತ್ಯಾಗ, ಬಲಿದಾನ ಮತ್ತು ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥರ ಪರಿಶ್ರಮದಿಂದ ಭವ್ಯ ಶ್ರೀರಾಮ ಮಂದಿರ ನಿರ್ಮಾಣಗೊಂಡಿದೆ. ಒಂದು ದೇಗುಲ ನಿರ್ಮಿಸಲು ಐದುನೂರು ವರ್ಷಗಳು ಬೇಕಾಯಿತು. ಇನ್ನು ಕಾಶಿ ವಿಶ್ವನಾಥ ಮತ್ತು ಮಥುರಾ ಶ್ರೀಕೃಷ್ಣನ ಪವಿತ್ರ ದೇಗುಲಗಳು ಬಾಕಿ ಉಳಿದಿವೆ. ಜಾತಿ ಆಧಾರದಲ್ಲಿ ಭಾರತ ಪಾಕಿಸ್ತಾನ ವಿಭಜನೆ ವೇಳೆ ಪಾಕಿಸ್ತಾನದ ಹಿಂದುಗಳನ್ನು ಭಾರತಕ್ಕೆ ಮತ್ತು ಭಾರತದ ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಸ್ಥಳಾಂತರಿಸುವಂತೆ ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದರು. ಆದರೆ ಅವರ ದೂರದೃಷ್ಟಿ ಅರ್ಥೈಸಿಕೊಳ್ಳಲಿಲ್ಲ. ಅಂದು ಪಾಕಿಸ್ತಾನದಲ್ಲಿ ಶೇ.22 ರಷ್ಟಿದ್ದ ಹಿಂದುಗಳು ಇಂದು ಶೇ.ಒಂದರಷ್ಟಾಗಿದೆ. ಬಾಂಗ್ಲಾದೇಶದಲ್ಲೂ ಹಿಂದುಗಳ ಸಂಖ್ಯೆ ಕಡಿಮೆಯಾಗಿದೆ. ಡಾ.ಅಂಬೇಡ್ಕರ್ ವಿಚಾರಧಾರೆಗಳನ್ನು ಅರಿಯಬೇಕಿದೆ. ಭಾರತದ ಸಂವಿಧಾನ, ರಾಷ್ಟ್ರ ಪ್ರೇಮ, ರಾಷ್ಟ್ರ ಗೀತೆಗೆ ಎಲ್ಲರೂ ಗೌರವಿಸಬೇಕು. ವಕ್ಫ್ ಎಂಬ ಕರಾಳ ಕಾನೂನಿಗೆ ಪ್ರಧಾನಿ ಮೋದಿ ಮತ್ತು ಗೃಹಮಂತ್ರಿ ಅಮಿತ್‌ಷಾ ತಿದ್ದುಪಡಿ ತಂದಿರುವುದು ಅಭಿನಂದನಾರ್ಹ ಕ್ರಮ ಎಂದರು.