

ಲಿಂಗಸುಗೂರು: ರಾಜಕಾರಣಿಗಳು ತಮ್ಮ ಹಿಂಬಾಲಕರಿಗೆ ಕಾಮಗಾರಿಗಳ ಗುತ್ತಿಗೆ ನೀಡುತ್ತಿರುವುದರಿಂದ ಪರವಾನಗಿ ಪಡೆದ ಗುತ್ತಿಗೆದಾರರು ಅತಂತ್ರ ಸ್ಥಿತಿ ಎದುರಿಸುವಂತಾಗಿದೆ ಎಂದು ಪಿಡಬ್ಲ್ಯೂಡಿ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಜಿ. ನಾಗಪ್ಪ ಗಿರಣಿ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಈಶ್ವರ ದೇವಸ್ಥಾನ ಸಭಾಂಗಣದಲ್ಲಿ ಪಿಡಬ್ಲ್ಯೂಡಿ ಗುತ್ತಿಗೆದಾರರ ಸಂಘದ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಗಳು ಪ್ಯಾಕೇಜ್ ಗುತ್ತಿಗೆ ರದ್ದುಗೊಳಿಸಿ ಕ್ರಿಯಾಯೋಜನೆ ಪ್ರಕಾರ ಟೆಂಡರ್ ಪ್ರಕ್ರಿಯೆಗೆ ಮುಂದಾಗಬೇಕು. ಇಲ್ಲದಿದ್ದರೆ ಪ್ರಮುಖ ಕಾಮಗಾರಿಗಳು ಸಚಿವರು, ಶಾಸಕರು ಮತ್ತು ಅವರ ಹಿಂಬಾಲಕರು ಅಥವಾ ಹೊರ ರಾಜ್ಯದ ಗುತ್ತಿಗೆದಾರರ ಪಾಲಾಗಲಿವೆ. ಇದರಿಂದ ಅರ್ಹ ಗುತ್ತಿಗೆದಾರರು ಸಂಕಷ್ಟ ಎದುರಿಸುವಂತಾಗಲಿದೆ ಎಂದರು.
ಪರವಾನಗಿಯುಳ್ಳ ಗುತ್ತಿಗೆದಾರರ ಹಕ್ಕನ್ನು ರಾಜಕಾರಣಿಗಳು ಕಸಿದುಕೊಳ್ಳುತ್ತಿದ್ದು, ಪರ್ಸೆಂಟೇಜ್ ಗುತ್ತಿಗೆ ಹೆಚ್ಚಾಗುತ್ತಿದೆ. ಇಂತಹ ಹತ್ತಾರು ಸಂಕಷ್ಟಗಳನ್ನು ಎದುರಿಸುತ್ತಿರುವ ಲೈಸೆನ್ಸ್ ಗುತ್ತಿಗೆದಾರರು ಪಕ್ಷಬೇಧ ಮರೆತು ಒಗ್ಗಟ್ಟಾಗಿ ಸರ್ಕಾರ, ರಾಜಕಾರಣಿಗಳು ಮತ್ತು ಅಧಿಕಾರಿಗಳ ವಿರುದ್ಧ ಹೋರಾಟಕ್ಕೆ ಮುಂದಾಗಬೇಕು. ಅಂದಾಗ ಸುಧಾರಣೆ ಕಾಣಲು ಸಾಧ್ಯವಾಗಲಿದೆ ಎಂದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ. ಮಲ್ಲಿಕಾರ್ಜುನ ಮಾತನಾಡಿ, ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣನವರ ಸೂಚನೆಯಂತೆ ಪ್ರತಿ ಜಿಲ್ಲೆ ಮತ್ತು ತಾಲೂಕು ಘಟಕ ಸ್ಥಾಪಿಸಲಾಗುತ್ತಿದ್ದು, ಕಳೆದ ನಾಲ್ಕೈದು ವರ್ಷಗಳಿಂದ ಗುತ್ತಿಗೆದಾರರ ಲೈಸೆನ್ಸ್‌ಗಳು ರಿನಿವಲ್ ಆಗುತ್ತಿಲ್ಲ. ಪ್ಯಾಕೇಜ್ ಗುತ್ತಿಗೆ ಜಾರಿಯಿಂದ ನೂರಾರು ಕೋಟಿ ರೂ. ಕಾಮಗಾರಿಗಳು ಅನ್ಯ ರಾಜ್ಯದ ಗುತ್ತಿಗೆದಾರರ ಪಾಲಾಗುತ್ತಿವೆ. ಲೈಸೆನ್ಸ್ ಗುತ್ತಿಗೆದಾರರು ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಅನೇಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಂಘದ ಜಿಲ್ಲಾ ಉಪಾಧ್ಯಕ್ಷ ಬಸಪ್ಪ ಕಂದಗಲ್, ತಾಲೂಕು ಅಧ್ಯಕ್ಷ ಅಯ್ಯನಗೌಡ ಪಾಟೀಲ್, ಗೌರವಾಧ್ಯಕ್ಷ ಬಸಣ್ಣ ಮೇಟಿ, ಪ್ರಮುಖರಾದ ಬಸವರಾಜ ಮರಕಮದಿನ್ನಿ, ಲಿಂಗರಾಜ ಪಾಟೀಲ್, ಸೂಗೂರಯ್ಯ ದಾಸೋಹಮಠ, ಶರಣಯ್ಯಸ್ವಾಮಿ ದಾಸೋಹಮಠ, ಗೋವಿಂದ ನಾಯಕ, ಬಲವಂತರಾಯ ಪಾಟೀಲ್ ಇತರರಿದ್ದರು.