ಆಕ್ಸಿಜನ್ ವ್ಯವಸ್ಥೆಯುಳ್ಳ ಸಾರಿಗೆ ಬಸ್ ಸಿದ್ಧಪಡಿಸಲು ಅಧಿಕಾರಿಗಳಿಗೆ ಡಿಸಿಎಂ ಲಕ್ಷ್ಮಣ ಸವದಿ ತಾಕೀತು

Laxman Savadi Visit Lingasuguru Govt Hospital
ಲಿಂಗಸುಗೂರು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಕೋವಿಡ್ ನಿರ್ವಹಣೆ ವ್ಯವಸ್ಥೆಗಳ ಕುರಿತು ಪರಿಶೀಲನೆ ನಡೆಸಿದರು.
Published on

ಲಿಂಗಸುಗೂರು: ಜಿಲ್ಲೆಯಲ್ಲಿ ಕರೊನಾ ವೈರಸ್ ಎರಡನೇ ಅಲೆ ತೀವ್ರತೆ ನಿಯಂತ್ರಿಸಲು ಪ್ರತಿ ಕ್ವಾರಂಟೈನ್ ಕೇಂದ್ರದ ಬಳಿ ಆಕ್ಸಿಜೆನ್ ವ್ಯವಸ್ಥೆಯುಳ್ಳ ಸಾರಿಗೆ ಬಸ್ ಸನ್ನದ್ಧ ಸ್ಥಿತಿಯಲ್ಲಿಡುವಂತೆ ಜಿಲ್ಲಾ ಉಸ್ತುವಾರಿ ಹಾಗೂ ಡಿಸಿಎಂ ಲಕ್ಷ್ಮಣ ಸವದಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಸ್ಥಳೀಯ ತಾಪಂ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕಂದಾಯ, ಆರೋಗ್ಯ, ಪೊಲೀಸ್, ಹಟ್ಟಿಚಿನ್ನದಗಣಿ ಕಂಪನಿ ಅಧಿಕಾರಿಗಳ ತುರ್ತುಸಭೆಯಲ್ಲಿ ಮಾತನಾಡಿದರು. ಪ್ರತಿ ಸಾರಿಗೆ ಬಸ್‌ನಲ್ಲಿ 5 ಆಕ್ಸಿಜನ್ ಸಿಲಿಂಡರ್‌ಗಳ ವ್ಯವಸ್ಥೆ ಮಾಡಿ ಕ್ವಾರಂಟೈನ್ ಕೇಂದ್ರದ ಬಳಿ ನಿಲ್ಲಿಸಿದರೆ ಕೋವಿಡ್ ರೋಗಿಗಳು ಆಕ್ಸಿಜನ್ ಪಡೆಯಲು ಅನುಕೂಲವಾಗಲಿದೆ. ಶೀಘ್ರ ಸಾರಿಗೆ ಘಟಕಗಳಿಂದ ಸಾರಿಗೆ ಬಸ್ ಪಡೆದು ವ್ಯವಸ್ಥೆ ಕಲ್ಪಿಸುವಂತೆ ಡಿಸಿ ಆರ್.ವೆಂಕಟೇಶ ಕುಮಾರರಿಗೆ ಸೂಚಿಸಿದರು.

ಹೋಮ್ ಕ್ವಾರಂಟೈನ್‌ನಲ್ಲಿರುವ ಕೋವಿಡ್ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‌ಗಳಿಗೆ ಕರೆ ತರಬೇಕಾದ ಅವಶ್ಯಕತೆಯಿದ್ದು, ಇದರಿಂದ ಚೈನ್‌ಬ್ರೇಕ್ ಆಗಿ ರೋಗ ಹರಡುವುದು ಕಡಿಮೆಯಾಗಲಿದೆ. ಸೋಂಕಿತರನ್ನು ಎರಡು ವಿಭಾಗಗಳಾಗಿ ವಿಂಗಡಿಸಿ ಸ್ಥಿತಿವಂತರು ಕೋವಿಡ್ ಕೇಂದ್ರಕ್ಕೆ ಬರಲು ಒಪ್ಪದಿದ್ದರೆ ಅವರದ್ದೇ ಖರ್ಚಿನಲ್ಲಿ ಖಾಸಗಿ ಹೋಟೆಲ್‌ನಲ್ಲಿ ಕ್ವಾರಂಟೈನ್ ಮಾಡಿ ಚಿಕಿತ್ಸೆ ಕೊಡಿ. ಬಡವರು, ಜನಸಾಮಾನ್ಯ ರೋಗಿಗಳನ್ನು ಕ್ವಾರಂಟೈನ್ ಕೇಂದ್ರಕ್ಕೆ ಕರೆತಂದು ಚಿಕಿತ್ಸೆ ನೀಡಿದರೆ ರೋಗ ನಿಯಂತ್ರಣ ಸಾಧ್ಯವಾಗಲಿದೆ ಎಂದರು.

ಹಟ್ಟಿ ಚಿನ್ನದಗಣಿ ಆಸ್ಪತ್ರೆಯಲ್ಲಿ 120 ಹಾಸಿಗೆಯಲ್ಲಿ 100 ಬೆಡ್‌ಗಳನ್ನು ಕೋವಿಡ್ ಸೋಂಕಿತರಿಗೆ ಮೀಸಲಿಡಲಾಗಿದೆ. ಸಿಲಿಂಡರ್, ಆಕ್ಸಿಜೆನ್, ಔಷಧ, ಸಿಬ್ಬಂದಿ ಅವಶ್ಯಕತೆ ಇದೆ ಎಂದು ಕಂಪನಿ ಅಧಿಕಾರಿ ಮಾಹಿತಿ ನೀಡುತ್ತಿದ್ದಂತೆ, ಔಷಧ ವ್ಯವಸ್ಥೆ ಡಿಸಿ ಮಾಡಲಿದ್ದಾರೆ. ಕಂಪನಿಯಿಂದ ತುರ್ತಾಗಿ 50 ಕಾನ್ಸ್ಸ್‌ಂಟ್ರೇಟರ್‌ಗಳನ್ನು ದೆಹಲಿ, ಪೂನಾ, ಮುಂಬಯಿನಿಂದ ತರಿಸಿಕೊಂಡು ತುರ್ತು ಚಿಕಿತ್ಸೆಗೆ ನೆರವಾಗಲಿದೆ ಎಂದು ಸೂಚಿಸಿದ ಸಚಿವರು, ಖಾಸಗಿ ಗ್ಯಾರೇಜ್‌ನಲ್ಲಿ ಹತ್ತಾರು ಸಿಲಿಂಡರ್‌ಗಳು ಇರುತ್ತವೆ. ಅವುಗಳನ್ನು ಪತ್ತೆ ಹಚ್ಚಿ ಆಕ್ಸಿಜೆನ್ ಕೊರತೆ ನೀಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಹಟ್ಟಿ, ಗುರುಗುಂಟ, ಮುದಗಲ್ ಭಾಗಗಳಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆದು ಚಿಕಿತ್ಸೆ, ಊಟ ಸೇರಿ ಮೂಲ ಸೌಕರ್ಯ ಒದಗಿಸಬೇಕು ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಡಿಎಚ್‌ಒ ಡಾ.ರಾಮಕೃಷ್ಣರಿಗೆ ಸೂಚಿಸಿದರು. ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕ ಡಿ.ಎಸ್.ಹೂಲಗೇರಿ, ಚಿನ್ನದಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್, ಡಿಸಿ ಆರ್.ವೆಂಕಟೇಶ ಕುಮಾರ, ಜಿಪಂ ಸಿಇಒ ಶೇಕ್ ತನ್ವೀರ್ ಆಸೀಫ್, ಎಸ್ಪಿ ಪ್ರಕಾಶ ನಿಕ್ಕಮ್, ಡಿಎಚ್‌ಒ ಡಾ.ರಾಮಕೃಷ್ಣ, ಎಸಿ ರಾಜಶೇಖರ ಡಂಬಳ, ತಹಸೀಲ್ದಾರ್ ಚಾಮರಾಜ ಪಾಟೀಲ್, ಟಿಎಚ್‌ಒ ಡಾ.ಅಮರೇಶ ಪಾಟೀಲ್, ತಾಪಂ ಇಒ ಲಕ್ಷ್ಮೀದೇವಿ, ಸಿಸಿಪಿಒ ಶರಣಮ್ಮ ಸೇರಿದಂತೆ ಇತರರಿದ್ದರು.

ಭೇಟಿ: ಸಭೆಯ ನಂತರ ಡಿಸಿಎಂ ಲಕ್ಷ್ಮಣ ಸವದಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಕೋವಿಡ್ ಕೇರ್ ಸೆಂಟರ್, ವೆಂಟಿಲೇಟರ್ ವ್ಯವಸ್ಥೆ, ಐಸಿಯು, ಸಿಟಿ ಸ್ಕ್ಯಾನ್ ಸೆಂಟರ್ ಸೇರಿ ಕೋವಿಡ್ ನಿರ್ವಹಣೆ ಕ್ರಮಗಳ ಕುರಿತು ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net