

ಲಿಂಗಸುಗೂರು: ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಮತ್ತು ಬಣಗಳಿಲ್ಲ. ಕಾರ್ಯಕರ್ತರು ಯಾವುದೇ ಗೊಂದಲಕ್ಕೀಡಾಗಬಾರದು. ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಒಗ್ಗೂಡಿ ಶ್ರಮಿಸಬೇಕು ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಹೇಳಿದರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದರು, ಇಂದಿನ ಪೂರ್ವ ಸಿದ್ಧತಾ ಸಭೆಗೆ ಜಿಲ್ಲಾಧ್ಯಕ್ಷ ಬಸವರಾಜ ಪಾಟೀಲ್ ಇಟಗಿ, ಮಾಜಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ, ಎಂಎಲ್‌ಸಿ ಶರಣಗೌಡ ಬಯ್ಯಪುರ ಹಾಗೂ ಪಕ್ಷದ ಹಿರಿಯ ಮುಖಂಡರು ಭಾಗವಹಿಸಬೇಕಿತ್ತು. ಆದರೆ ಇತ್ತೀಚೆಗೆ ಜಿಲ್ಲಾಧ್ಯಕ್ಷರಾಗಿ ಆಯ್ಕೆಗೊಂಡ ಇಟಗಿ ಹಾಗೂ ಬಯ್ಯಪುರ ಅವರು ಆಯಾ ಜಿಲ್ಲಾ ಕೇಂದ್ರದ ಪಕ್ಷದ ಸಭೆಯಲ್ಲಿ ಭಾಗವಹಿಸಿದ್ದಾರೆ. ಅನೇಕ ಮುಖಂಡರು ಕೂಡ ತಮ್ಮ ವೈಯಕ್ತಿಕ ಕೆಲಸ ಕಾರ್ಯಗಳ ನಿಮಿತ್ತ ಭಾಗಿಯಾಗಿಲ್ಲ. ಬರುವ ದಿನಗಳಲ್ಲಿ ನಡೆಯುವ ಸಭೆ, ಸಮಾರಂಭಗಳಲ್ಲಿ ಭಾಗವಹಿಸಲಿದ್ದಾರೆ. ಇದರಲ್ಲಿ ಯಾವುದೇ ಸಂಶಯಬೇಡವೆಂದು ಹೇಳಿದರು.
ಕಲ್ಯಾಣ ಕರ್ನಾಟಕ ಭಾಗಕ್ಕೆ 371(ಜೆ) ಕಲಂ ಜಾರಿಯಿಂದ ರಾಜ್ಯದ 28 ಜಿಲ್ಲೆಗಳಿಗೆ ಅನ್ಯಾಯವಾಗುತ್ತಿದೆ ಎಂದು ಸಚಿವ ಎಚ್.ಕೆ.ಪಾಟೀಲರು ಸರ್ಕಾರಕ್ಕೆ ಪತ್ರ ಬರೆದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅಂದು ವಿಧಾನಸಭೆಯಲ್ಲಿ ಬಹುಮತದಿಂದ ಅಂಗೀಕಾರ ದೊರೆತಿದೆ. ಇದಕ್ಕೆ ಯಾರ ವಿರೋಧವೂ ಇಲ್ಲ. 371(ಜೆ) ಕಲಂ ಜಾರಿಯಿಂದ ಈ ಭಾಗದ ಜನರಿಗೆ, ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಿದೆ. ಕಲಂ ಜಾರಿಯಲ್ಲಿ ಕೆಲ ಸಣ್ಣಪುಟ್ಟ ದೋಷಗಳಿದ್ದು, ಮುಂದಿನ ಸಂಪುಟ ಸಭೆಯಲ್ಲಿ ಚರ್ಚಿಸುವ ಜತೆಗೆ ಎಚ್.ಕೆ.ಪಾಟೀಲರು ಬರೆದ ಪತ್ರದ ಬಗ್ಗೆ ಮಾಹಿತಿ ಪಡೆಯುವುದಾಗಿ ತಿಳಿಸಿದರು.
ಸರ್ಕಾರದಲ್ಲಿ ಹಣಕಾಸಿನ ತೊಂದರೆ ಇರುವುದಿಲ್ಲ ಎಂದಾಗ. ಮಧ್ಯ ಪ್ರವೇಶಿಸಿದ ಮಾಜಿ ಶಾಸಕ ಡಿ.ಎಸ್.ಹೂಲಗೇರಿ, ಸರ್ಕಾರ ಬಿಡುಗಡೆ ಮಾಡಿದ ಅನುದಾನ ಬಳಕೆಯಲ್ಲಿ ಸ್ಥಳೀಯ ಶಾಸಕರ ಇಚ್ಛಾಸಕ್ತಿ ಕೊರತೆ ಎದ್ದು ಕಾಣುತ್ತಿದೆ ಎಂದು ಪ್ರತಿಕ್ರಿಯಿಸಿದರು.