ಕೃಷ್ಣಾ ನದಿಗೆ 1.66 ಲಕ್ಷ ಕ್ಯೂಸೆಕ್ ನೀರು ಶೀಲಹಳ್ಳಿ ಸೇತುವೆ ಮುಳುಗಡೆ; ನಡುಗಡ್ಡೆ ಪ್ರದೇಶದ ಸಂಪರ್ಕ ಕಡಿತ

17072022 lingasugur shilahalli flood
Published on

ಲಿಂಗಸುಗೂರು: ನಾರಾಯಣಪುರದ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 23 ಕ್ರಸ್ಟ್‌ಗೇಟ್‌ಗಳ ಮೂಲಕ 1,66,586 ಕ್ಯೂಸೆಕ್ ನೀರನ್ನು ಭಾನುವಾರ ಬಿಡಲಾಗಿದ್ದು, ನಡುಗಡ್ಡೆ ಹಳ್ಳಿಗಳಿಗೆ ಸಂಪರ್ಕಿಸುವ ಶೀಲಹಳ್ಳಿ ಸೇತುವೆ ಮೇಲೆ ನೀರು ಹರಿಯುತ್ತಿದೆ.

ಆಲಮಟ್ಟಿ ಅಣೆಕಟ್ಟೆಯಿಂದ ಬಸವಸಾಗರ ಜಲಾಶಯಕ್ಕೆ 1.60 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. 1,60,586 ಕ್ಯೂಸೆಕ್ ನೀರನ್ನು ಕ್ರಸ್ಟ್‌ಗೇಟ್‌ಗಳ ಮೂಲಕ ನದಿಗೆ ನೇರವಾಗಿ ಮತ್ತು ಮುರುಡೇಶ್ವರ ವಿದ್ಯುತ್ ಉತ್ಪಾದನಾ ಘಟಕದ ಮೂಲಕ 6 ಸಾವಿರ ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ. ಜಲಾಶಯದ ಗರಿಷ್ಠ ಎತ್ತರ 492.252 ಮೀ. (33 ಟಿಎಂಸಿ ಸಂಗ್ರಹ ಸಾಮರ್ಥ್ಯ) ಇದ್ದು, ಭಾನುವಾರ ನೀರಿನ ಮಟ್ಟ 491.07 ಮೀ. (28.12 ಟಿಎಂಸಿ) ಇತ್ತು.
ತಾಲೂಕಿನ ಶೀಲಹಳ್ಳಿ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ನದಿ ತೀರದ ಕಡದರಗಡ್ಡಿ, ಯರಗೋಡಿ, ಹಂಚಿನಾಳ ಗ್ರಾಮಗಳ ಜನತೆ ಜಲದುರ್ಗ ಮಾರ್ಗವಾಗಿ ತಾಲೂಕು ಕೇಂದ್ರಕ್ಕೆ ಬರಬೇಕಿದೆ. ನಡುಗಡ್ಡೆ ಪ್ರದೇಶದ ಮ್ಯಾದರಗಡ್ಡಿ, ಕರಕಲಗಡ್ಡಿ, ವೆಂಕಮ್ಮನಗಡ್ಡಿ ನಿವಾಸಿಗಳು ಬಾಹ್ಯ ಸಂಪರ್ಕ ಕಳೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net