ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿ; ಲಿಂಗಸುಗೂರು ನಾಗರಿಕರ ಸಮಿತಿ ಒತ್ತಾಯ

31082021 Lingasugur Citizens Committee urged
Published on

ಪುರಸಭೆ ಸಿಒ ನರಸಪ್ಪ ತಹಸೀಲ್ದಾರ್‌ಗೆ ಮನವಿ

ಲಿಂಗಸುಗೂರು: ಪುರಸಭೆ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಶುದ್ಧ ಕುಡಿಯುವ ನೀರು ಮತ್ತು ಘನತ್ಯಾಜ್ಯ ವಿಲೇವಾರಿ ಸಮಸ್ಯೆ ಎದುರಾಗಿದ್ದು, ಕೂಡಲೇ ಶಾಶ್ವತ ಪರಿಹಾರ ಒದಗಿಸಬೇಕೆಂದು ಲಿಂಗಸುಗೂರು ನಾಗರಿಕರ ಸಮಿತಿ ಒತ್ತಾಯಿಸಿದೆ.

ಪುರಸಭೆ ಸಿಒ ನರಸಪ್ಪ ತಹಸೀಲ್ದಾರ್‌ಗೆ ಮಂಗಳವಾರ ಮನವಿ ಸಲ್ಲಿಸಿತು. ಬಹುತೇಕ ವಾರ್ಡ್‌ಗಳಿಗೆ ನಿಗದಿತ ಸಮಯಕ್ಕೆ ಮತ್ತು ಶುದ್ಧ ಕುಡಿಯುವ ನೀರು ಪೂರೈಕೆ ಮಾಡುತ್ತಿಲ್ಲ. ನೀರು ಶುದ್ಧೀಕರಣಗೊಳಿಸದೆ ಸರಬರಾಜು ಮಾಡಲಾಗುತ್ತಿದೆ. ಇದರಿಂದ ವಾಂತಿ-ಬೇಧಿ ಮತ್ತು ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಮೋಟಾರ್ ಪಂಪ್‌ಗಳು ಪದೇಪದೆ ದುರಸ್ತಿಗೆ ಬರುತ್ತಿವೆ. ಸಾರ್ವಜನಿಕ ತೆರಿಗೆ ಹಣ ಪೋಲಾಗುತ್ತಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

ಅದೇರೀತಿ ಘನತ್ಯಾಜ್ಯ ವಿಲೇವಾರಿ ವಾಹನಗಳು ಕೆಟ್ಟು ಹೋದ ಪರಿಣಾಮ ಘನತ್ಯಾಜ್ಯ ವಿಲೇವಾರಿಯಾಗದೆ ತಿಪ್ಪೆಗುಂಡಿಯಂತಾಗಿವೆ. ಸ್ವಚ್ಛ ಭಾರತ ಅಭಿಯಾನದಡಿ ಸಾಕಷ್ಟು ಅನುದಾನ ಬರುತ್ತಿದ್ದರೂ ಸರಿಯಾಗಿ ಬಳಕೆಯಾಗುತ್ತಿಲ್ಲ. ಪಟ್ಟಣ ಹಾಗೂ ಕರಡಕಲ್, ಕಸಬಾಲಿಂಗಸುಗೂರು, ಹುಲಿಗುಡ್ಡ ಸೇರಿ ಪುರಸಭೆ ವ್ಯಾಪ್ತಿಯ 23 ವಾರ್ಡ್‌ಗಳಲ್ಲಿ ರಸ್ತೆ, ಚರಂಡಿ ಸೇರಿ ಮೂಲ ಸೌಕರ್ಯಗಳು ಮರೀಚಿಕೆಯಾಗಿವೆ. ಕೂಡಲೇ ಈ ಎಲ್ಲ ಸಮಸ್ಯೆಗಳ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಸಮಿತಿ ಮುಖಂಡರಾದ ಉಮೇಶ ಸರ್ಜಾಪುರ, ಚನ್ನವೀರಯ್ಯ, ಮಹಾಂತೇಶ ಸುಂಕದ, ಸೂರ್ಯಕಾಂತ ವಕೀಲ, ರಾಜೇಶ ನಾಯಕ, ಶಿವಕುಮಾರ ನಂದಿಕೋಲಮಠ, ರಾಜಶೇಖರ ಪಾಟೀಲ್, ವಿಜಯ ಮೇಟಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net