

ಲಿಂಗಸುಗೂರು: ಪಹಲ್ಗಾಮ್‌ನಲ್ಲಿ 26 ಪ್ರವಾಸಿಗರನ್ನು ಧರ್ಮ ಕೇಳಿ ಹತ್ಯೆಗೈದ ಪಾಕ್ ಪ್ರಾಯೋಜಿತ ಉಗ್ರರು ಮತ್ತು ಅವರಿಗೆ ಸಹಕಾರ ನೀಡುವವರ ಹುಟ್ಟಡಗಿಸಲು ಭಾರತೀಯ ಸೈನ್ಯಕ್ಕೆ ನಾವೆಲ್ಲ ಆತ್ಮಸ್ಥೈರ್ಯ ತುಂಬಬೇಕಿದೆ ಎಂದು ಶಾಸಕ ಮಾನಪ್ಪ ವಜ್ಜಲ್ ಹೇಳಿದರು.
ಪಟ್ಟಣದ ದೊಡ್ಡ ಆಂಜನೇಯ ದೇವಸ್ಥಾನ ದಿಂದ ಲಕ್ಷ್ಮೀ ದೇವಸ್ಥಾನದವರೆಗೆ ಬಿಜೆಪಿ ಮತ್ತು ಮಾಜಿ ಸೈನಿಕರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ 700 ಅಡಿ ಉದ್ದದ ಭಾರತ ಧ್ವಜ ತಿರಂಗಾ ಯಾತ್ರೆಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು. ಭಾರತದ ಮೇಲೆ ಪಾಕಿಸ್ತಾನದ ಡ್ರೋನ್ ಮತ್ತು ಏರ್‌ಬೇಸ್‌ಗಳನ್ನು ಹೊಡೆದುರುಳಿಸಿ, ತಕ್ಕ ಉತ್ತರ ನೀಡಿದ ಕೀರ್ತಿ ಭಾರತೀಯ ಸೈನಕ್ಕೆ ಸಲ್ಲುತ್ತದೆ. ಪಾಕಿಸ್ತಾನದ ಉಗ್ರರ ಒಂಬತ್ತು ನೆಲೆಗಳನ್ನು ಕ್ಷಿಪಣಿಗಳ ಮೂಲಕ ಧ್ವಂಸಗೊಳಿಸಿದ ಮಹಿಳಾ ಸೈನಿಕರು ಇಡೀ ವಿಶ್ವಕ್ಕೆ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಸಚಿವರಾದ ಅಮಿತ್ ಷಾ ಮತ್ತು ರಾಜನಾಥ ಸಿಂಗ್ ಅವರು ಆಪರೇಷನ್ ಸಿಂಧೂರ ಕಾರ್ಯಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, ಪಹಲ್ಗಾಮ್‌ನಲ್ಲಿ ಹಿಂದು ಮಹಿಳೆಯರ ಸಿಂಧೂರ ಅಳಿಸಿದ ಉಗ್ರರನ್ನು ಮತ್ತು ಉಗ್ರರಿಗೆ ಸಹಕರಿಸಿದವರನ್ನು ಬಿಡುವುದಿಲ್ಲವೆಂಬ ಸಂಕಲ್ಪ ತೊಟ್ಟು ಪಾಕಿಸ್ತಾನಕ್ಕೆ ಎಚ್ಚರಿಕೆ ಸಂದೇಶ ನೀಡಿದ್ದಾರೆ ಎಂದು ಹೇಳಿದರು.
ಮಾಜಿ ಸೈನಿಕರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷಯ್ಯ ಹಿರೇಮಠ ಮಾತನಾಡಿ, ಭಾರತೀಯ ಸೈನ್ಯದ ಪಾಕಿಸ್ತಾನದ ಒಂಬತ್ತು ಉಗ್ರ ನೆಲೆಗಳನ್ನು ಧ್ವಂಸಗೊಳಿಸಿ ಪರಾಕ್ರಮ ಮೆರೆದಿದ್ದಾರೆ. ಆಪರೇಷನ್ ಸಿಂಧೂರ ಅಂತ್ಯವಲ್ಲ, ಆರಂಭವಾಗಿದೆ. ಇದಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದರೆ ಮಾಜಿ ಸೈನಿಕರು ಸಹ ಯುದ್ಧಕ್ಕೆ ಸನ್ನದ್ಧವಾಗಿರಲಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಲೆಕ್ಕಿಹಾಳ, ಪ್ರಧಾನ ಕಾರ್ಯದರ್ಶಿ ಸಂತೋಷ ರಾಜಗುರು, ಮಂಡಲ ಅಧ್ಯಕ್ಷ ಅಯ್ಯಪ್ಪ ವಕೀಲ, ಮಾಜಿ ಸೈನಿಕರ ಸಂಘದ ತಾಲೂಕು ಅಧ್ಯಕ್ಷ ವೀರನಗೌಡ ಬಯ್ಯಪುರ ಪ್ರಮುಖರಾದ ಶರಣಪ್ಪ ಮೇಟಿ, ಅಮರೇಶಪ್ಪ ಹೂನೂರು, ಬಸನಗೌಡ ಮೇಟಿ, ನಿಂಗಣ್ಣ ದೇವಿಕೇರಿ, ಮಲ್ಲಿಕಾರ್ಜುನ ಕೆಂಭಾವಿ, ಚನ್ನಬಸವ ಹಿರೇಮಠ, ಅನಂತದಾಸ, ಪರಮೇಶ ಯಾದವ, ಎಚ್.ಪವಾರ್, ಬಿಜೆಪಿ ಮಹಿಳಾ ಮಂಡಲ ಅಧ್ಯಕ್ಷೆ ನಾಗರತ್ನ ಸಕ್ರಿ, ಜ್ಯೋತಿ ಸುಂಕದ್ ಇತರರಿದ್ದರು.