

ಲಿಂಗಸುಗೂರು: ಸಂಶೋಧನೆಯ ಗುಣಮಟ್ಟ ಕಾಯ್ದುಕೊಳ್ಳಲು ಆಧುನಿಕ ತಂತ್ರಜ್ಞಾನ ಮತ್ತು ನವ ಮಾದರಿಯ ತಾಂತ್ರಿಕ ಸಲಕರಣೆಗಳನ್ನು ಬಳಸುವಾಗ ಸಂಶೋಧಕರು ಎಚ್ಚರವಹಿಸಬೇಕೆಂದು ಉಡುಪಿ ಮಾಧವ ವಾದಿರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಮ್ಯಾನೇಜ್‌ಮೆಂಟ್‌ನ ಸಹಪ್ರಾಧ್ಯಾಪಕ ಡಾ.ರಂಜನ್ ಕುಮಾರ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ ಮತ್ತು ಸಂಶೋಧನಾ ಘಟಕದಡಿ ಬೋಧಕರಿಗಾಗಿ ಗುರುವಾರ ಹಮ್ಮಿಕೊಂಡಿದ್ದ ಮೆಕ್ಯಾನೀಸ್ ಆಫ್ ರಿಸರ್ಚ್ ವಿಷಯದ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾಷೆ, ಮಾನವಿಕ ಅಧ್ಯಯನ, ವಾಣಿಜ್ಯ, ವಿಜ್ಞಾನ ವಿಭಾಗಗಳು, ಸಂಶೋಧನಾ ವಿಧಾನಗಳು ಹಾಗೂ ತಂತ್ರಜ್ಞಾನದಿಂದ ಪಡೆಯುವ ಜ್ಞಾನವಾಗಿದ್ದು, ವಿವಿಧ ಸಂಶೋಧನೆಗಳಿಗೆ ಹೆಚ್ಚಿನ ಆದ್ಯತೆ ದೊರೆಯಬೇಕಿದೆ ಎಂದರು.
ಪ್ರಾಚಾರ್ಯ ಡಾ.ಹನುಮಂತಪ್ಪ ಮಾತನಾಡಿ, ವಿಶ್ವವಿದ್ಯಾಲಯಗಳಲ್ಲಿ ಗುಣಮಟ್ಟ ಮಾರ್ಗದರ್ಶಕರ ಸಂಖ್ಯೆ ಕುಸಿದಿದ್ದರಿಂದ ಸಂಶೋಧನೆಗೆ ಹೆಚ್ಚು ಪ್ರಾಶಸ್ತ್ಯ ಸಿಗುತ್ತಿಲ್ಲ. ಪದವಿ ಕಾಲೇಜುಗಳಲ್ಲಿಯೂ ಸಂಶೋಧನೆಗೆ ಆದ್ಯತೆ ದೊರೆಯಬೇಕಿದೆ. ಈ ಬಗ್ಗೆ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು ಚಿಂತನೆ ನಡೆಸುವ ಅಗತ್ಯವಿದೆ ಎಂದು ಹೇಳಿದರು.