ನದಿ ಪಾತ್ರದ ರೈತರು ಮುಂಜಾಗ್ರತೆ ವಹಿಸಲಿ

Untitled design (5)
ಫೋಟೋ: 19ಎಲ್‌ಎನ್‌ಜಿ03(ಎ) ಮತ್ತು (ಬಿ) - ಲಿಂಗಸುಗೂರು ತಾಲೂಕಿನ ಕೃಷ್ಣಾ ನದಿ ತೀರದ ಗ್ರಾಮಗಳು ಹಾಗೂ ಪ್ರದೇಶಗಳಿಗೆ ತಹಸೀಲ್ದಾರ್ ಶಂಶಾಲಂ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಶಿರಸ್ತೇದಾರ್ ಅಮರೇಶ, ಆರ್‌ಐ ಮಲ್ಲಿಕಾರ್ಜುನ ಕಟ್ಟಿಮನಿ, ವಿಎ ರಾಮಪ್ಪ ಇದ್ದರು.
Published on

ಲಿಂಗಸುಗೂರು: ಮಹಾರಾಷ್ಟ್ರ ಭಾಗದಲ್ಲಿ ಮಳೆ ಆರ್ಭಟ ಹೆಚ್ಚಾಗಿರುವುದರಿಂದ ಕೋಯಿನಾ ಜಲಾಶಯದಿಂದ ಆಲಮಟ್ಟಿ ಹಾಗೂ ಬಸವಸಾಗರ ಆಣೆಕಟ್ಟೆಗೆ ಹೆಚ್ಚುವರಿ ನೀರು ಹರಿಬಿಡುವ ಸಾಧ್ಯತೆಯಿದ್ದು, ತಾಲೂಕಿನ ಕೃಷ್ಣಾ ನದಿ ತೀರದ ಗ್ರಾಮಗಳಿಗೆ ತಹಸೀಲ್ದಾರ್ ಶಂಶಾಲಂ ನೇತೃತ್ವದ ಅಧಿಕಾರಿಗಳ ತಂಡ ಗುರುವಾರ ಸಂಜೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಆಲಮಟ್ಟಿ ಜಲಾಶಯದಿಂದ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಈಗಾಗಲೇ 70 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 68 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಮಹಾರಾಷ್ಟ್ರದಿಂದ ಆಲಮಟ್ಟಿ ಆಣೆಕಟ್ಟೆಗೆ ಇನ್ನೂ ಹೆಚ್ಚುವರಿ ನೀರು ಹರಿಬಿಟ್ಟರೆ, ಬಸವಸಾಗರ ಜಲಾಶಯದ ಸಮತೋಲನ ಕಾಯ್ದುಕೊಳ್ಳಲು ಹಂತ ಹಂತವಾಗಿ ಕೃಷ್ಣಾ ನದಿಗೆ ಹೆಚ್ಚುವರಿ ನೀರು ಹರಿಬಿಡಲಾಗುತ್ತದೆ. ಇದರಿಂದ ನದಿಯಲ್ಲಿ ಪ್ರವಾಹ ಉಂಟಾಗಿ ನದಿ ತೀರದ ಹಳ್ಳಿಗಳು ಹಾಗೂ ನಡುಗಡ್ಡೆ ಪ್ರದೇಶ ಸಂಕಷ್ಟ ಎದುರಿಸಬೇಕಾಗಿದೆ.

ತಾಲೂಕು ಆಡಳಿತ ನದಿ ತೀರದ ಹಳ್ಳಿಗಳು ನಡುಗಡ್ಡೆ ಪ್ರದೇಶದಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ತಹಸೀಲ್ದಾರ್ ಶಂಶಾಲಂ ನೇತೃತ್ವದ ಅಧಿಕಾರಿಗಳ ತಂಡ ಶೀಲಹಳ್ಳಿ, ಕಡದರಗಡ್ಡಿ, ಯರಗೋಡಿ, ಹಂಚಿನಾಳ, ಯಳಗುಂದಿ, ಜಲದುರ್ಗ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರವಾಹಕ್ಕೆ ಸಿಲುಕುವ ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಪಂ ಪಿಡಿಒ, ನೋಡಲ್ ಅಧಿಕಾರಿಗಳು, ಗ್ರಾಮ ಲೆಕ್ಕಿಗರು ಹಾಗೂ ಅಲ್ಲಿನ ಜನರ ಜತೆ ಸಭೆ ನಡೆಸಿದರು.

ನಾರಾಯಣಪುರದ ಬಸವಸಾಗರ ಜಲಾಶಯದಿಂದ ಲಕ್ಷಾಂತರ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿಬಿಟ್ಟರೆ ನದಿಯಲ್ಲಿ ಪ್ರವಾಹ ಸಾಧ್ಯತೆಯಿದೆ. ಕೃಷ್ಣಾ ನದಿ ಪಾತ್ರದ ಗ್ರಾಮಗಳ ಜನತೆ, ರೈತರ ಮುಂಜಾಗ್ರತೆ ವಹಿಸಬೇಕು. ನದಿಯಲ್ಲಿ ಮಹಿಳೆಯರು, ಮಕ್ಕಳು, ಜಾನುವಾರುಗಳು ಸೇರಿ ಯಾರೂ ಇಳಿಯದಂತೆ ಜಾಗೃತಿ ವಹಿಸಬೇಕು. ಜಾನುವಾರುಗಳು, ಪಂಪ್‌ಸೆಟ್ ಇತ್ಯಾದಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು. ನದಿ ತೀರದಲ್ಲಿ ಯಾವುದೇ ಚಟುವಟಿಕೆ ನಡೆಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಸಬೇಕೆಂದು ಅಧಿಕಾರಿಗಳು ಜಾಗೃತಿ ಮೂಡಿಸಿದರು.

ಯರಗೋಡಿ ಸಮೀಪದ ಮ್ಯಾದರಗಡ್ಡಿ, ಕರಕಲಗಡ್ಡಿ, ವೆಂಕಮ್ಮನಗಡ್ಡಿ ನಡುಗಡ್ಡೆ ಪ್ರದೇಶದಲ್ಲಿ ಸುಮಾರು 65 ಎಕರೆ ಜಮೀನಿನಲ್ಲಿ ಕೃಷಿ ಕಾರ್ಯಕೈಗೊಳ್ಳುವ ರೈತಾಪಿ ಕುಟುಂಬಗಳಿಗೆ ಈಗಾಗಲೇ ಯಳಗುಂದಿ ಬಳಿಯ ಸರ್ಕಾರಿ ಜಮೀನಿಯಲ್ಲಿ ನಿವೇಶನ ಗುರುತಿಸಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ನಡುಗಡ್ಡೆ ರೈತರನ್ನು ಅಲ್ಲಿಗೆ ಸ್ಥಳಾಂತರಿಸಲಾಗಿದೆ. ಕೆಲವರು ಬೆಂಗಳೂರಿಗೆ ಗುಳೆ ತೆರಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net