

ಲಿಂಗಸುಗೂರು: ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 29 ಕ್ರಸ್ಟ್ ಗೇಟ್ ಮೂಲಕ ಶುಕ್ರವಾರ 2,58,290 ಕ್ಯೂಸೆಕ್ ನೀರು ಹರಿಬಿಟ್ಟಿದ್ದರಿಂದ ನದಿಯಲ್ಲಿ ಪ್ರವಾಹ ಹೆಚ್ಚಾಗಿ, ತಾಲೂಕಿನ ಶೀಲಹಳ್ಳಿ ಬಳಿಯ ಸೇತುವೆ ಮೇಲೆ ನೀರು ಬಂದಿದೆ.
ಮಹಾರಾಷ್ಟ್ರ ಭಾಗದಲ್ಲಿ ಹೆಚ್ಚಿನ ಮಳೆ ಸುರಿಯುತ್ತಿದ್ದು, ಕೋಯ್ನ ಜಲಾಶಯ ಭರ್ತಿಯಾಗಿದ್ದರಿಂದ ಆಲಮಟ್ಟಿ ಅಣೆಕಟ್ಟೆಗೆ ಅಧಿಕ ಪ್ರಮಾಣದಲ್ಲಿ ನೀರು ಬರುತ್ತಿದೆ. ಇದರಿಂದಾಗಿ ಆಲಮಟ್ಟಿ ಡ್ಯಾಂನಿಂದ ಬಸವಸಾಗರ ಜಲಾಶಕ್ಕೆ ನೀರು ಬಂದಿದ್ದು, ಹೆಚ್ಚುವರಿ ನೀರನ್ನು ಕೃಷ್ಣಾ ನದಿಗೆ ಬಿಟ್ಟಿದ್ದರಿಂದ ಶೀಲಹಳ್ಳಿ ಸೇತುವೆ ಮುಳುಗಿದೆ.
ಸೇತುವೆ ಮೇಲೆ ನೀರು ಬಂದಿದ್ದರಿಂದ ಜನ, ವಾಹನ ಸಂಚಾರ ಸ್ಥಗಿತಗೊಂಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸೇತುವೆಯ ಎರಡೂ ಬದಿ ಬ್ಯಾರಿಕೇಡ್ ಅಳವಡಿಸಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಶೀಲಹಳ್ಳಿ, ಕಡದರಗಡ್ಡಿ, ಯರಗೋಡಿ, ಹಂಚಿನಾಳ ಗ್ರಾಮಗಳ ಜನ ಜಲದುರ್ಗ ಮಾರ್ಗವಾಗಿ 45 ಕಿಮೀ. ಸುತ್ತುವರಿದು ತಾಲೂಕು ಕೇಂದ್ರಕ್ಕೆ ಬರುವಂತಾಗಿದೆ.
ಅಧಿಕಾರಿಗಳ ಭೇಟಿ: ಸಹಾಯಕ ಆಯುಕ್ತ ರಾಹುಲ್ ಸಂಕನೂರು, ತಹಸೀಲ್ದಾರ್ ಚಾಮರಾಜ ಪಾಟೀಲ್, ಆರ್‌ಐ ರಾಘವೇಂದ್ರ ಕೊಪ್ಪದ್, ವಿಎ ರಮೇಶ ಸೇರಿ ವಿವಿಧ ಅಧಿಕಾರಿಗಳ ತಂಡ ಶೀಲಹಳ್ಳಿ ಸೇತುವೆ, ಯರಗೋಡಿ ಸೇತುವೆ ಹಾಗೂ ನದಿ ತೀರದ ಕಡದರಗಡ್ಡಿ, ಯರಗೋಡಿ ಗ್ರಾಮಗಳಿಗೆ ಭೇಟಿ ನೀಡಿ ವಸ್ತುಸ್ಥಿತಿ ಪರಿಶೀಲನೆ ಮಾಡಿದರು.
ಕೃಷ್ಣಾ ನದಿಗೆ 2.58 ಲಕ್ಷ ಕ್ಯೂಸೆಕ್ ನೀರು ಹರಿಬಿಟ್ಟಿದ್ದರಿಂದ ನದಿ ತೀರದ ಗ್ರಾಮಗಳಿಗೆ ಭೇಟಿ ನೀಡಿದ್ದೇವೆ. ಸುರಕ್ಷಿತ ಸ್ಥಳದಲ್ಲಿರಲು ಅಲ್ಲಿನ ಜನರಿಗೆ ಸೂಚನೆ ನೀಡಿದ್ದೇವೆ. ಸಂತ್ರಸ್ತರಿಗೆ ಗಂಜಿ ಕೇಂದ್ರ ತೆರೆಯುವ ಪರಿಸ್ಥಿತಿ ಒದಗಿ ಬಂದರೆ ಅದನ್ನು ನಿಭಾಯಿಸಲು ಯರಗೋಡಿ ಅಂಗನಾಡಿ ಕೇಂದ್ರದಲ್ಲಿ ಪಡಿತರ ಸಂಗ್ರಹಿಸಲಾಗಿದೆ _.| ಚಾಮರಾಜ ಪಾಟೀಲ್, ಲಿಂಗಸುಗೂರು ತಹಸೀಲ್ದಾರ್