

ಲಿಂಗಸುಗೂರು: ನಾರಾಯಣಪುರದ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 23 ಕ್ರಸ್ಟ್ ಗೇಟ್‌ಗಳ ಮೂಲಕ 1,68,518 ಕ್ಯೂಸೆಕ್ ನೀರನ್ನು ಶನಿವಾರ ಹರಿಬಿಡಲಾಗಿದೆ. ಇದರಿಂದಾಗಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ನಡುಗಡ್ಡೆ ಹಳ್ಳಿಗಳಿಗೆ ಸಂಪರ್ಕಿಸುವ ಶೀಲಹಳ್ಳಿ ಸೇತುವೆ ಮುಳುಗಡೆಗೊಂಡು ಸಂಪರ್ಕ ಕಡಿತಗೊಂಡಿದೆ.
ಆಲಮಟ್ಟಿ ಅಣೆಕಟ್ಟೆಯಿಂದ ಬಸವಸಾಗರ ಜಲಾಶಯಕ್ಕೆ 1.50 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 1,62,518 ಕ್ಯೂಸೆಕ್ ನೇರವಾಗಿ ಮತ್ತು ಮುರುಡೇಶ್ವರ ವಿದ್ಯುತ್ ಉತ್ಪಾದನಾ ಘಟಕದ ಮೂಲಕ 6 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಜಲಾಶಯದ ಗರಿಷ್ಠ ಸಂಗ್ರಹ ಸಾಮರ್ಥ್ಯ 33 ಟಿಎಂಸಿ ಇದ್ದು, ಶುಕ್ರವಾರ 28.82 ಟಿಎಂಸಿ ಸಂಗ್ರಹವಾಗಿತ್ತು.
ಜಲಾಶಯದಿಂದ 1,68,518 ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಬಿಟ್ಟ ಹಿನ್ನೆಲೆಯಲ್ಲಿ ಶೀಲಹಳ್ಳಿ ಸೇತುವೆ ಮೇಲ್ಭಾಗದಲ್ಲಿ ಒಂದು ಅಡಿ ನೀರು ಹರಿಯುತ್ತಿದೆ. ಇದರಿಂದಾಗಿ ತಾಲೂಕಿನ ನದಿ ತೀರದ ಕಡದರಗಡ್ಡಿ, ಯರಗೋಡಿ, ಹಂಚಿನಾಳ ಗ್ರಾಮಗಳ ಜನತೆ ಜಲದುರ್ಗ ಮಾರ್ಗವಾಗಿ 45 ಕಿ.ಮೀ. ಸುತ್ತುವರಿದು ತಾಲೂಕು ಕೇಂದ್ರಕ್ಕೆ ಬರುವ ಅನಿವಾರ್ಯತೆ ಎದುರಾಗಿದೆ. ನಡುಗಡ್ಡೆ ಪ್ರದೇಶದಲ್ಲಿ ವಾಸವಿರುವ ಮ್ಯಾದರಗಡ್ಡಿ, ಕರಕಲಗಡ್ಡಿ, ವೆಂಕಮ್ಮನಗಡ್ಡಿ ನಿವಾಸಿಗಳು ಬಾಹ್ಯ ಸಂಪಕ ಕಳೆದುಕೊಂಡಿದ್ದಾರೆ.