ಕ.ಕ.ಅಭಿವೃದ್ಧಿಗೆ ಖರ್ಗೆ ಕೊಡುಗೆ ಅಪಾರ- ಕೆಪಿಸಿಸಿ ಕಾರ್ಯದರ್ಶಿ ವಸಂತ ಕುಮಾರ ಹೇಳಿಕೆ

061222 Lingasuguru Kharge Preparatory meeting for felicitation ceremony
ಲಿಂಗಸುಗೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಎ.ವಸಂತ ಕುಮಾರ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವಿಸಿದರು.
Published on

ಲಿಂಗಸುಗೂರು: ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಜನತೆ ಶೈಕ್ಷಣಿಕ, ಔದ್ಯೋಗಿಕ ಪ್ರಗತಿಗೆ 371(ಜೆ) ಕಲಂ ತಿದ್ದುಪಡಿ ಜಾರಿ ಸೇರಿ ಈ ಭಾಗದ ಸಮಗ್ರ ಅಭಿವೃದ್ಧಿಯಲ್ಲಿ ಎಐಸಿಸಿ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕೊಡುಗೆ ಅಪಾರ ಎಂದು ಕೆಪಿಸಿಸಿ ಕಾರ್ಯದರ್ಶಿ ಎ.ವಸಂತ ಕುಮಾರ ಹೇಳಿದರು.

ಡಿ.10ರಂದು ಹಮ್ಮಿಕೊಂಡಿರುವ ಮಲ್ಲಿಕಾರ್ಜುನ ಖರ್ಗೆ ಅವರ ಅಭಿನಂದನಾ ಸಮಾರಂಭದ ಕುರಿತು ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಪೂರ್ವಸಿದ್ಧತಾ ಸಭೆ ಉದ್ಘಾಟಿಸಿ ಮಾತನಾಡಿ, 371(ಜೆ) ಜಾರಿಗೊಳಿಸಬೇಕೆಂಬ ಬೇಡಿಕೆ ಎನ್‌ಡಿಎ ಸರ್ಕಾರ ತಳ್ಳಿ ಹಾಕಿತ್ತು. ಆದರೆ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಾರಿಗೊಳಿಸಲಾಯಿತು. ಇದಕ್ಕೆ ಖರ್ಗೆ ಅವರ ಪ್ರಯತ್ನ ಅಪಾರ. ಕಲಂ ಜಾರಿಯಿಂದ ಈ ಭಾಗದ ಹಲವು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಮತ್ತು ಉದ್ಯೋಗ ದೊರೆತಿವೆ ಎಂದರು.

ಮಹಾನ್ ನಾಯಕ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಗೊಂಡು ಪ್ರಥಮ ಬಾರಿಗೆ ಕಲಬುರಗಿಗೆ ಆಗಮಿಸುತ್ತಿದ್ದು, ಡಿ.10 ರಂದು ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರ ರಾಜಕೀಯ ಜೀವನ, ಅವರ ಪರಿಶ್ರಮ, ಸಾಧನೆ, ವರ್ಚಸ್ಸು, ಉನ್ನತ ಹುದ್ದೆ ಮತ್ತು ಕಾಂಗ್ರೆಸ್ ಪಕ್ಷದ ಅಧಿಕಾರ ಅವಧಿಯ ಸಾಧನೆಗಳ ಕುರಿತು ನಾಡಿನ ಎಲ್ಲ ವಿಧಾನಸಭಾ ಕ್ಷೇತ್ರಗಳ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಡಿ.ಎಸ್.ಹೂಲಗೇರಿ ಕಾಂಗ್ರೆಸ್ ಅಭ್ಯರ್ಥಿ ಆಗುವುದು ಖಚಿತವಾಗಿದ್ದು, ಜನ ಯಾವುದೇ ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು. ಚುನಾವಣೆಯಲ್ಲಿ ಪುನಃ ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಶಾಸಕ ಡಿ.ಎಸ್.ಹೂಲಗೇರಿ ಮಾತನಾಡಿ, ಕಕ ಭಾಗದ ಅಭಿವೃದ್ಧಿಯ ಹರಿಕಾರರೆಂದೇ ಪ್ರಖ್ಯಾತಿ ಪಡೆದ ಮಲ್ಲಿಕಾರ್ಜುನ ಖರ್ಗೆ ಅವರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಲು ಕ್ಷೇತ್ರದಿಂದ ವಾಹನಗಳ ವ್ಯವಸ್ಥೆ ಕಲ್ಪಿಸಲಾಗುವುದು. ಜ.8ರಂದು ಚಿತ್ರದುರ್ಗದಲ್ಲಿ ನಡೆಯುವ ಎಸ್ಸಿ-ಎಸ್ಟಿ ಸಮಾವೇಶಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ವ್ಯವಸ್ಥೆ ಕಲ್ಪಿಸಲಾಗುವುದು. ಈ ಎರಡೂ ಸಮಾರಂಭಗಳನ್ನು ಜನ ಯಶಸ್ವಿಗೊಳಸಬೇಕೆಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೂಪನಗೌಡ ಪಾಟೀಲ್, ಮುಖಂಡರಾದ ಶರಣಪ್ಪ ಮೇಟಿ, ಅಮರಗುಂಡಪ್ಪ ಮೇಟಿ, ಗುಂಡಪ್ಪ ನಾಯಕ, ಮಲ್ಲಣ್ಣ ವಾರದ್, ದಾವೂದ್, ಖಾದರಪಾಷಾ, ಕಂಠೆಪ್ಪಗೌಡ, ಗುಂಡಪ್ಪ ಕಾಚಾಪುರ, ಸೋಮಶೇಖರ ಐದನಾಳ, ಕುಮಾರಸ್ವಾಮಿ ಸಾಲ್ಮನಿ, ಮಹಾಂತೇಶ ಪಾಟೀಲ್, ವೆಂಕಟರಾವ್ ಜಹಗೀರದಾರ, ಪಾಮಯ್ಯ ಮುರಾರಿ, ನಿಂತಪ್ಪ ಮನಗೂಳಿ, ವಿಜಯಲಕ್ಷ್ಮೀ ದೇಸಾಯಿ, ಪರಸಪ್ಪ ಹುನಕುಂಟಿ, ಶಿವಣ್ಣ ಕೋಠಾ, ಪ್ರಮೋದ ಕುಲಕರ್ಣಿ, ಕುಪ್ಪಣ್ಣ ಕೊಡ್ಲಿ, ರುದ್ರಪ್ಪ ಬ್ಯಾಗಿ ಇತರರು ಇದ್ದರು.

ಪ್ರತ್ಯೇಕ ಗುಂಪು ಕಟ್ಟಿಕೊಂಡು ಪ್ರಚಾರ ಸಲ್ಲ: ಕ್ಷೇತ್ರದಲ್ಲಿ ಕೆಲವರು ನಾವೇ ಅಭ್ಯರ್ಥಿಗಳೆಂದು ಪ್ರಚಾರಕ್ಕೆ ಇಳಿದಿದ್ದಾರೆ. ಇದಕ್ಕೆ ಸ್ಪಷ್ಟನೆ ನೀಡಬೇಕೆಂದು ಸಭೆಯಲ್ಲಿದ್ದ ಕೆಲ ಕಾರ್ಯಕರ್ತರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವಸಂತ ಕುಮಾರ, ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಇಂತಹ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಯಾರೇ ಆಕಾಂಕ್ಷಿಗಳು ಪ್ರತ್ಯೇಕ ಗುಂಪು ಕಟ್ಟಿಕೊಂಡು ಪ್ರಚಾರಕ್ಕಿಳಿದರೆ ಅದಕ್ಕೆ ಪಕ್ಷ ಜವಾಬ್ದಾರಿಯಲ್ಲ. ಕೆಪಿಸಿಸಿ ಮತ್ತು ಬ್ಲಾಕ್ ಸಮಿತಿ ಅಧ್ಯಕ್ಷ, ಪದಾಧಿಕಾರಿಗಳು ಭಾಗವಹಿಸುವ ಕಾರ್ಯಕ್ರಮ ಮಾತ್ರ ಅಧಿಕೃತ ಎಂದು ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net