

ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಸಲಹೆ ಕೋರ್ಟ್, ವಕೀಲರ ಸಂಘದ ಕಟ್ಟಡಕ್ಕೆ ಶಂಕುಸ್ಥಾಪನೆ
ಲಿಂಗಸುಗೂರು: ನ್ಯಾಯಾಲಯದಲ್ಲಿ ಅನೇಕ ವರ್ಷಗಳಿಂದ ನಡೆಯುತ್ತಿರುವ ವ್ಯಾಜ್ಯಗಳ ವಿಲೇವಾರಿಗೆ ನ್ಯಾಯಾಧೀಶರಿಗೆ ವಕೀಲರು ಸಹಕಾರ ನೀಡಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಹೇಳಿದರು.
ಪಟ್ಟಣದಲ್ಲಿ ನ್ಯಾಯಾಲಯ ಕಟ್ಟಡ ಹಾಗೂ ವಕೀಲರ ಸಂಘದ ಕಟ್ಟಡಕ್ಕೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಸಾರ್ವಜನಿಕರ ಪಾಲಿಗೆ ನ್ಯಾಯಾಲಯ ಎಂಬುದು ದೇಗುಲ ಎಂಬ ಭಾವನೆಯಿದೆ. ದೇವಸ್ಥಾನದಲ್ಲಿ ಪ್ರಸಾದ ಸಿಗುತ್ತದೆ. ಆದರೆ ನ್ಯಾಯಲಯದಲ್ಲಿ ಕಕ್ಷಿದಾರರಿಗೆ ನ್ಯಾಯ, ಬದುಕು ಸಿಗುತ್ತೆ. ಹೀಗಾಗಿ ನ್ಯಾಯಾಲಯದ ಗೌರವ ಹೆಚ್ಚಿಸುವ ಕೆಲಸವನ್ನು ವಕೀಲರು ಮಾಡಬೇಕೆಂದರು.
ನ್ಯಾಯಾಧೀಶರು ಹಾಗೂ ವಕೀಲರು ನ್ಯಾಯಾಲಯದ ಎರಡು ಚಕ್ರ ಇದ್ದಂತೆ. ಈ ಎರಡು ಚಕ್ರಗಳು ಸರಿಯಾಗಿ ನಡೆದರೆ ನ್ಯಾಯಾಂಗದ ವ್ಯವಸ್ಥೆಯೂ ಸುಗಮವಾಗಿರುತ್ತದೆ. ಯುವ ವಕೀಲರು ಸೆಕ್ಷನ್, ಕಾಯ್ದೆಗಳ ಬಗ್ಗೆ ಅರಿತುಕೊಳ್ಳಬೇಕು. ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನು ಓದುವ ಅಭ್ಯಾಸ ಮಾಡಿಕೊಳ್ಳಬೇಕು ಎಂದು ಹೇಳಿದರು.