

ಲಿಂಗಸುಗೂರು: ಶಿವಲಿಂಗುವಿಗೆ ಜಡೆಗಳಂತೆ ಹನ್ನೊಂದು ಉಬ್ಬು ಗೀರುಗಳಿರುವುದರಿಂದ ಜಡೆಶಂಕರಲಿಂಗ ಎಂಬ ಐತಿಹ್ಯವಿರುವ ತಾಲೂಕಿನ ನವಿಲೆ (ಈಗಿನ ನವಲಿ) ಗ್ರಾಮದ ಜಡೆಶಂಕರಲಿಂಗೇಶ್ವರ ದೇವಾಲಯದಲ್ಲಿ ಶಿವರಾತ್ರಿ ಅಮಾವಾಸ್ಯೆ ಅಂಗವಾಗಿ ಅಪಾರ ಭಕ್ತರ ಮಧ್ಯೆ ಗುರುವಾರ ಸಂಜೆ ಮಹಾರಥೋತ್ಸವ ನಡೆಯಲಿದೆ.
ಬಸವಸಾಗರ ಜಲಾಶಯ ನಿರ್ಮಾಣದ ಬಳಿಕ ಹಿನ್ನೀರಿನಿಂದ ಜಲಾವೃತಗೊಳ್ಳುತ್ತಿದ್ದ ದೇವಸ್ಥಾನವನ್ನು ಆಧುನಿಕ ಸ್ಪರ್ಶದೊಂದಿಗೆ ಕಳೆದ ವರ್ಷ ಫೆ.19 ರಂದು ಉದ್ಘಾಟಿಸಲಾಗಿದೆ. ನವಿಲೆ ಶ್ರೀ ಜಡೆಶಂಕರಲಿಂಗ ದೇವಸ್ಥಾನವನ್ನು ಕಲ್ಯಾಣ ಚಾಲುಕ್ಯರ ಚಕ್ರವರ್ತಿ ಐದನೇ ವಿಕ್ರಮಾದಿತ್ಯ (ತ್ರಿಭುವನಮಲ್ಲದೇವ) 1,012 ರಲ್ಲಿ ನಿರ್ಮಿಸಿ 1,119 ರಲ್ಲಿ ಚಿನ್ನದ ಕಳಸಾರೋಹಣ ನೆರವೇರಿಸಿದನೆಂದು ಶಾಸನದಿಂದ ತಿಳಿದು ಬರುತ್ತದೆ.
ಭಕ್ತರ ಆರಾಧ್ಯ ದೈವ: 11 ನೇ ಶತಮಾನದ ಶಂಕರದಾಸಿಮಯ್ಯ ಶರಣರ ಜನ್ಮಸ್ಥಳ ನವಿಲೆಯಾಗಿದ್ದು, 12 ನೇ ಶತಮಾನದ ವಚನಕಾರ ದೇವರ ದಾಸಿಮಯ್ಯನು ಜಡೆಶಂಕರಲಿಂಗನ ದರ್ಶನ ಪಡೆದು ಪ್ರಭಾವಿತನಾಗಿ, ಇಲ್ಲಿಯೇ ನೆಲೆನಿಂತು ಅನೇಕ ವಚನಗಳನ್ನು ಬರೆದನು. ಬಳಿಕ ಶಿವದೀಕ್ಷೆ ಪಡೆದು ದಾಸೋಹ ಮತ್ತು ನೂಲಿಗೆ ಬಣ್ಣ ಹಾಕುವ ಕಾಯಕದಲ್ಲಿ ನಿರತನಾದನೆಂದು ಪುರಾಣಗಳಿಂದ ತಿಳಿದು ಬರುತ್ತದೆ. ಜಡೆಶಂಕರಲಿಂಗನು ಬಣಗಾರರು, ಶಿವಶಿಂಪಿಗರು, ನಾಗಲೀಕರು, ನೀಲಗಾರರು, ಜವಳಿಯವರೆಂದು ಕರೆಯುವ ಸಮುದಾಯದ ಆರಾಧ್ಯ ದೈವವಾಗಿದ್ದಾನೆ.
ದೇವಸ್ಥಾನದ ಜೀರ್ಣೋದ್ಧಾರ: ಜಗದೀಶ ಶೆಟ್ಟರ್ ಸಿಎಂ ಇದ್ದಾಗ ಕೂಡಲಸಂಗಮ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಭಕ್ತರು ಮನವಿ ಮಾಡಿದ್ದರು. ಆಗ ನಿವೃತ್ತ ಸಿಇ ಬಸವರಾಜ ಗದ್ವಾಲ್ 3 ಕೋಟಿ ರೂ. ವೆಚ್ಚದ ಕ್ರಿಯಾಯೋಜನೆ ಸಿದ್ಧಪಡಿಸಿದರು. ಬಳಿಕ ಟೆಂಡರ್ ಕರೆದು ದೇವಸ್ಥಾನಕ್ಕೆ ಆಧುನಿಕ ಸ್ಪರ್ಶ ನೀಡಲಾಯಿತು. ಪ್ರಾಚೀನ ಶಿಲಾನ್ಯಾಸದಂತೆ ಹನ್ನೆರಡು ಶಿಲ್ಪಾಕೃತಿಯ ಕಂಬಗಳು, ಗರ್ಭಗುಡಿ, ಗೋಪುರ, ರಂಗಮಂಟಪ, ನವರಂಗ, ಶ್ರೀ ಗಣಪತಿ, ನಂದಿ, ಶಿವಬಸಮ್ಮ (ಪಾರ್ವತಿ), ಕುಲಗುರು ಶಂಕರ ದಾಸಿಮಯ್ಯನವರ ಮೂರ್ತಿ ಪ್ರತಿಷ್ಠಾಪಿಸಲಾಗಿದೆ.
ಈ ಬಾರಿ ಜಾತ್ರೋತ್ಸವದ ಪ್ರಯುಕ್ತ ಫೆ.26 ರಂದು ಸಜ್ಜಲಗುಡ್ಡ, ಕಂಬಳಿಹಾಳದ ದೊಡ್ಡಬಸವಾರ್ಯ ತಾತನವರ ಸಾನ್ನಿಧ್ಯದಲ್ಲಿ ಮಹಾರುದ್ರಾಭಿಷೇಕ, ಗಂಟೆಗೆ ಗಡ್ಡಿ ಗದ್ದೆಮ್ಮದೇವಿಗೆ ಉಡಿ ತುಂಬುವ ಕಾರ್ಯಕ್ರಮ, ಕಳಸಾರೋಹಣ, ಸಂಜೆ ಲಘು ರಥೋತ್ಸವ, ಮಹಾಶಿವರಾತ್ರಿ ಜಾಗರಣೆ ನಡೆಸಲಾಯಿತು. ಫೆ. 27 ರಂದು ರಥೋತ್ಸವಕ್ಕೆ ಮದ್ಧಾನೇಶ್ವರ ಮಠದ ಕರಿಬಸವ ಶಿವಾಚಾರ್ಯರು ಮತ್ತು ದೊಡ್ಡಬಸವಾರ್ಯರು ಚಾಲನೆ ನೀಡಲಿದ್ದಾರೆ.