

ಲಿಂಗಸುಗೂರು: ತಾಲೂಕಿನಾದ್ಯಂತ ಭಾನುವಾರ ಸಂಜೆ ಬಿರುಗಾಳಿ ಸಹಿತ ಮಳೆ ಸುರಿದ ಪ್ರಯುಕ್ತ ಗಿಡ-ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ಭಾನುವಾರ ರಾತ್ರಿಯಿಂದ ಸೋಮವಾರ ಸಂಜೆವರೆಗೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದ್ದರಿಂದ ಸಾರ್ವಜನಿಕರು ಪರದಾಡಿದರು.
ಬಿರುಗಾಳಿ, ಗುಡುಗು, ಮಿಂಚು ಸಹಿತ ಮಳೆ ಆರಂಭಗೊಳ್ಳುತ್ತಿದ್ದಂತೆ ವಿದ್ಯುತ್ ಕಡಿತಗೊಂಡಿತು. ಬಿರುಗಾಳಿಯಿಂದ ಪುರಸಭೆ ವ್ಯಾಪ್ತಿಯಲ್ಲಿ ಗಿಡ-ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿದವು. ಪಟ್ಟಣದ ಹೊರವಲಯದಲ್ಲಿ ಅಲೆಮಾರಿ ಸಮುದಾಯಗಳ ಗುಡಿಸಲುಗಳು, ಟಿನ್ ಶೆಡ್‌ಗಳು ಹಾನಿಗೀಡಾಗಿವೆ. ಬಹುತೇಕ ವಾರ್ಡ್‌ಗಳ ರಸ್ತೆ ಬದಿಯ ಗಿಡ-ಮರಗಳು ವಿದ್ಯುತ್ ಕಂಬದ ಮೇಲೆ ಬಿದ್ದು, ವಿದ್ಯುತ್ ಕಂಬಗಳು ಹಾನಿಗೀಡಾಗಿವೆ.
ಆನೆಹೊಸೂರು, ಈಚನಾಳ, ದೇವರಭೂಪುರ, ಗುಂತಗೋಳ, ಹೊನ್ನಳ್ಳಿ, ಗೊರೇಬಾಳ, ರೋಡಲಬಂಡಾ ಸೇರಿ ವಿವಿಧೆಡೆ ಗುಡಿಸಲುಗಳು, ಟಿನ್ ಶೆಡ್‌ಗಳು ಬಿರುಗಾಳಿಯಿಂದ ಹಾನಿಗೀಡಾಗಿವೆ. ಕಳೆದ ಒಂದು ವಾರದಿಂದ ಕೆಲವೆಡೆ ಅಲ್ಪ-ಸ್ವಲ್ಪ ಮಳೆಯಾದ ಪ್ರಯುಕ್ತ ಮುಂಗಾರು ಹಂಗಾಮಿನ ಬಿತ್ತನೆ ಸಿದ್ಧತೆಯಲ್ಲಿದ್ದ ರೈತಾಪಿ ವರ್ಗಕ್ಕೆ ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಅನುಕೂಲವಾಗಿದೆ. ಕೃಷಿ ಚಟುವಟಿಕೆ ಚುರುಕುಗೊಳ್ಳುವಂತೆ ಮಾಡಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಮೂರು ಜನರಿಗೆ ಗಾಯ: ಪುರಸಭೆ ವ್ಯಾಪ್ತಿಯ ಕರಡಕಲ್ ಸಿದ್ಧಾರೂಢ ಮಠದ ಬಳಿ ಯಲ್ಲಮ್ಮ ಶಿವಪ್ಪ ಎಂಬುವವರ ಟಿನ್ ಶೆಡ್ ಮನೆ ಮೇಲೆ ವಿದ್ಯುತ್ ಕಂಬ ಬಿದ್ದು ಮನೆ ಜಖಂಗೊಂಡಿದೆ. ಕುಟುಂಬದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಪಟ್ಟಣದ ಎಸಿ ಕಚೇರಿ ರಸ್ತೆ, ಗೌಳಿಪುರ ರಸ್ತೆ, ಅರಣ್ಯ ಇಲಾಖೆ ವಸತಿ ಗೃಹ ಆವರಣ, ಕಾರಾಗೃಹ, ಸರ್ಕಾರಿ ಆಸ್ಪತ್ರೆ ರಸ್ತೆ ಬದಿಯ ಗಿಡ-ಮರಗಳು, ಟೊಂಗೆಗಳು ಮುರಿದು ಬಿದ್ದು, ಸಂಚಾರಕ್ಕೆ ವ್ಯತ್ಯಯವಾಯಿತು. ಧರೆಗುರುಳಿದ ಗಿಡ-ಮರಗಳ ಟೊಂಗೆಗಳನ್ನು ಸಾರ್ವಜನಿಕರು ಕಡಿದು ಮನೆಗೆ ತೆಗೆದುಕೊಂಡು ಹೋದರು.