

ಲಿಂಗಸುಗೂರು: ಬಿಜೆಪಿ ಯುವ ಮುಖಂಡ ಉಮೇಶ ಕಾರಜೋಳ ಅಭಿಮಾನಿ ಬಳಗದಿಂದ ಪುರಸಭೆ ಸದಸ್ಯ ದೊಡ್ಡನಗೌಡ ಹೊಸಮನಿ ನೇತೃತ್ವದ ತಂಡ ಆಸ್ಪತ್ರೆ ರೋಗಿಗಳಿಗೆ, ಬಡವರಿಗೆ, ಕರೊನಾ ವಾರಿಯರ್ಸ್‌ಗೆ ನಿತ್ಯ ಆಹಾರ ಪೌಚ್, ಮೊಟ್ಟೆ ವಿತರಿಸುತ್ತಿರುವುದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಕರೊನಾ ವೈರಸ್ ಎರಡನೇ ಅಲೆ ತೀವ್ರತೆ ತಪ್ಪಿಸಲು ಸರ್ಕಾರ ಮೂರು ದಿನ ಲಾಕ್‌ಡೌನ್ ಘೋಷಣೆ ಮಾಡಿದ್ದು, ಇದರಿಂದ ಹೋಟೆಲ್, ಖಾನಾವಳಿ, ಬೀದಿಬದಿ ಉಪಹಾರ ಬಂಡಿಗಳ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ರೋಗಿಗಳು ಹಾಗೂ ಅವರ ಸಂಬಂಧಿಕರು, ಬಡವರು, ನಿರ್ಗತಿಕರು, ಪರಿಚಾರಕರು, ಹೊರಗೆ ಆಹಾರ ಸೇವಿಸುವವರು ಬೆಳಗ್ಗೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕಾಗಿ ಪರದಾಡುವಂತಾಗಿತ್ತು.
ಇದನ್ನರಿತ ಅಭಿಮಾನಿ ಬಳಗ ನಿತ್ಯ 500 ಜನಕ್ಕಾಗುವಷ್ಟು ಬೆಳಗ್ಗೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟದ ಪೌಚ್ ಜತೆಗೆ ಪ್ರತಿ ಪೌಚ್ ಜತೆಗೆ ಎರಡು ಬೈಲ್ಡ್ ಎಗ್ ಸ್ವಯಂ ಪ್ರೇರಿತರಾಗಿ ವಿತರಿಸುತ್ತಿದ್ದಾರೆ.
ಸಹಾಯ ಹಸ್ತ: ಉಮೇಶ ಕಾರಜೋಳ ಅಭಿಮಾನಿ ಬಳಗದ ಸದರಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಕೆಲವರು ಸಹಾಯ ಹಸ್ತ ಚಾಚುತ್ತಿದ್ದು, ಪುರಸಭೆ ಸದಸ್ಯ ರೌಫ್ ಗ್ಯಾರಂಟಿ 50 ಕೇಜಿ ಅಕ್ಕಿ ಮತ್ತು ತರಕಾರಿ, ಅಮರೇಶ್ವರ ಹಾರ್ಡ್‌ವೇರ್‌ನ ಶಿವಕುಮಾರ ಸಾಲ್ಮನಿ 100 ಕೇಜಿ ಅಕ್ಕಿ ಮತ್ತು ಮಧುಸೂಧನ ಕನಕಗಿರಿ 100 ಕೇಜಿ ಅಕ್ಕಿಯನ್ನು ಬಳಗಕ್ಕೆ ನೀಡಿದ್ದಾರೆ.