ವಾರ್ಷಿಕ ವೇತನ ಬಡ್ತಿ ತಡೆ ಆದೇಶ ಹಿಂಪಡೆಯಲಿ

lng-1
ಲಿಂಗಸುಗೂರು ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ ಕುಳಿಗೇರಿಗೆ ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದಿಂದ ಮನವಿ ಸಲ್ಲಿಸಲಾಯಿತು. ಸಂಘದ ಜಿಲ್ಲಾಧ್ಯಕ್ಷ ಪ್ರಭುಲಿಂಗ ಗದ್ದಿ, ತಾಲೂಕು ಅಧ್ಯಕ್ಷ ಬಸಪ್ಪ ಹಂದ್ರಾಳ, ಮಲ್ಲಿಕಾರ್ಜುನ, ಹನುಮನಗೌಡ ಪೊಲೀಸ್ ಪಾಟೀಲ್, ಜಮದಗ್ನಿ, ಸಂಗನಗೌಡ, ಶರಣಬಸವರಾಜ, ಸಂಗಮೇಶ ಇತರರಿದ್ದರು.
Published on

ಲಿಂಗಸುಗೂರು: ಎಸ್ಸೆಸ್ಸೆಲ್ಸಿಯಲ್ಲಿ ವಿಷಯವಾರು ಫಲಿತಾಂಶ ಶೇ.60ಕ್ಕಿಂತ ಕಡಿಮೆ ಪಡೆದ ಅನುದಾನಿತ ಪ್ರೌಢಶಾಲೆಗಳ ಸಹ ಶಿಕ್ಷಕರನ್ನು ಗುರುತಿಸಿ ವಾರ್ಷಿಕ ವೇತನ ಬಡ್ತಿ ತಡೆ ಹಿಡಿಯುವ ಆದೇಶ ಹಿಂಪಡೆಯಬೇಕೆಂದು ಒತ್ತಾಯಿಸಿ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘ ಪಟ್ಟಣದಲ್ಲಿ ಪ್ರಭಾರ ಬಿಇಒ ಹನುಮಂತಪ್ಪ ಕುಳಿಗೇರಿ ಮೂಲಕ ಶಾಲಾ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಶುಕ್ರವಾರ ಮನವಿ ಸಲ್ಲಿಸಿತು.

ವಿದ್ಯಾರ್ಥಿಗಳ ಫಲಿತಾಂಶ ಕಡಿಮೆ ಬರಲು ಕೇವಲ ಶಿಕ್ಷಕರು ಕಾರಣವಲ್ಲ. ಬೆಳಗ್ಗೆ 9 ರಿಂದ 10 ರವರೆಗೆ ವಿಶೇಷ ತರಗತಿ, ಸಂಜೆ ದತ್ತು ಮಕ್ಕಳ ಯೋಜನೆ, ಗುಂಪು ಅಧ್ಯಯನ, ರಾತ್ರಿ ಹಾಗೂ ರಜಾ ಅವಧಿಗಳಲ್ಲೂ ಅಭ್ಯಾಸ ಮಾಡಿಸುವುದು ಮತ್ತು ಇಲಾಖೆ ನೀಡುವ ಮಾರ್ಗದರ್ಶನಗಳನ್ನು ತಪ್ಪದೆ ಪಾಲಿಸುತ್ತಿದ್ದೇವೆ.

ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ತುಂಬದಿರುವುದು, ಆಂಗ್ಲ ಮಾಧ್ಯಮ ತರಗತಿ ತೆರೆಯಲು ಅವಕಾಶ ಇಲ್ಲದಿರುವುದರಿಂದ ಮಕ್ಕಳ ದಾಖಲಾತಿ ಗಣನೀಯ ಕಡಿಮೆ ಆಗುತ್ತಿದೆ. ಈ ಬಗ್ಗೆ ಶಿಕ್ಷಣ ಸಚಿವರಿಗೆ ಹಲವಾರು ಬಾರಿ ಮನವಿ ಮಾಡಲಾಗಿದೆ. ಶಿಕ್ಷಕರನ್ನು ನೇಮಿಸಿಕೊಳ್ಳಲು ತಾಂತ್ರಿಕ ತೊಂದರೆಗಳಿವೆ ಎನ್ನಲಾಗುತ್ತಿದೆ.

ಅದಕ್ಕಾಗಿ ವಾರ್ಷಿಕ ವೇತನ ಬಡ್ತಿ ಮತ್ತು ವೇತನ ಅನುದಾನ ತಡೆಯುವುದರಿಂದ ಶಿಕ್ಷಕರ ಕುಟುಂಬ ನಿರ್ವಹಣೆ ಕಷ್ಟವಾಗುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸರಿಪಡಿಸಿಕೊಂಡು ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಹಾಗೂ ಫಲಿತಾಂಶ ಹೆಚ್ಚಿಸಲು ಸಹಕಾರ ನೀಡಬೇಕೆಂದು ಕೋರಿದರು.

ಸಂಘದ ಜಿಲ್ಲಾಧ್ಯಕ್ಷ ಪ್ರಭುಲಿಂಗ ಗದ್ದಿ, ತಾಲೂಕು ಅಧ್ಯಕ್ಷ ಬಸಪ್ಪ ಹಂದ್ರಾಳ, ಶಿಕ್ಷಕರಾದ ಮಲ್ಲಿಕಾರ್ಜುನ, ಹನುಮನಗೌಡ ಪೊಲೀಸ್ ಪಾಟೀಲ್, ಜಮದಗ್ನಿ, ಸಂಗನಗೌಡ, ಶರಣಬಸವರಾಜ, ಸಂಗಮೇಶ, ಮರಿಯಪ್ಪ, ಬಸವರಾಜ, ಮಲ್ಲಿಕಾರ್ಜುನ ಗೌಡರ್, ಡಿ.ಆರ್.ಮಂಜುನಾಥ, ಎಂ.ಡಿ ಮೆಹಬೂಬ್, ನಾಗಪ್ಪ, ಮಲ್ಲಪ್ಪ ವಿರೂಪಾಕ್ಷಿಗೌಡ ಪೊಲೀಸ್ ಪಾಟೀಲ್, ಮಂಜುನಾಥ ಪೂಜಾರಿ, ಕೇಶಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net