

ಲಿಂಗಸುಗೂರು: ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸ್ಥಳೀಯ ಜಿಟಿಟಿಸಿ ಕಾಲೇಜಿನಲ್ಲಿ ದೀರ್ಘಾವಧಿ ಮತ್ತು ಅಲ್ಪಾವಧಿ ಡಿಪ್ಲೊಮಾ ಕೋರ್ಸುಗಳಿಗೆ ಪ್ರವೇಶಾತಿ ಆರಂಭಗೊಂಡಿವೆ ಎಂದು ಕಾಲೇಜು ಪ್ರಾಚಾರ್ಯೆ ಪ್ರತಿಭಾ ಪಾಟೀಲ್ ತಿಳಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೈಗಾರಿಕೆಗಳಿಗೆ ಮಾನವ ಸಂಪನ್ಮೂಲ ಒದಗಿಸುವ ನಿಟ್ಟಿನಲ್ಲಿ 2005ರಲ್ಲಿ ಆರಂಭಗೊಂಡ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ಕಾಲೇಜು ಎಐಸಿಟಿಇ ಯಿಂದ ಅನುಮೋದನೆ ಪಡೆದ ದೀರ್ಘಾವಧಿ ಕೋರ್ಸ್‌ಗಳಾದ ಡಿಟಿಡಿಎಂ ಮತ್ತು ಡಿಎಆರ್ ವಿಭಾಗದಲ್ಲಿ ತಲಾ 60 ಸೀಟುಗಳು, ಡಿಪಿಎಂ ವಿಭಾಗದಲ್ಲಿ 30 ಸೀಟುಗಳು ಇವೆ.
ಜಿಟಿಟಿಸಿ ಕೋರ್ಸ್‌ಗಳನ್ನು ಮುಗಿಸಿದ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಣನೀಯ ಬೇಡಿಕೆ ಇದೆ. ಐಟಿಐ, ಪಿಯುಸಿ ಸೈನ್ಸ್ ಪಾಸಾದ ವಿದ್ಯಾರ್ಥಿಗಳಿಗೆ ನೇರವಾಗಿ ಮೂರನೇ ಸೆಮಿಸ್ಟರ್‌ಗೆ ಪಾರ್ಶ್ವ ಪ್ರವೇಶಾತಿ ನಿಯಮಾನುಸಾರ ಪಡೆಯಲು ಅವಕಾಶವಿದೆ.
ಪ್ರವೇಶಾತಿಗೆ ಮೇ 29 ಕೊನೆ ದಿನವಾಗಿದ್ದು, ಆಸಕ್ತ ವಿದ್ಯಾರ್ಥಿಗಳು ಉಪಕೇಂದ್ರಕ್ಕೆ ಅಗತ್ಯ ದಾಖಲೆಗಳೊಂದಿಗೆ ಭೇಟಿ ನೀಡಬೇಕು. ಮಾಹಿತಿಗೆ ಮೊ. 9902072101, 8762564872ಗೆ ಸಂಪರ್ಕಿಸಬೇಕು ಎಂದರು. ಉಪನ್ಯಾಸಕರಾದ ಮೌನೇಶ ನಾಯಕ, ಶಂಕರಮ್ಮ ಇದ್ದರು.