

ಲಿಂಗಸುಗೂರು: ಪ್ರಸಕ್ತ ವರ್ಷ ಹತ್ತಿ ಬೆಳೆಗೆ ಸಮರ್ಪಕ ಬೆಲೆಯಿಲ್ಲದೆ ರೈತರು ಕಂಗಾಲಾಗಿದ್ದಾರೆ. ಹೀಗಾಗಿ ಸರ್ಕಾರ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ತಕ್ಷಣ ಹತ್ತಿ ಖರೀದಿ ಕೇಂದ್ರಗಳನ್ನು ಆರಂಭಿಸಿ, ಬೆಂಬಲ ಬೆಲೆಯಲ್ಲಿ ಹತ್ತಿ ಖರೀದಿಸಬೇಕು ಎಂದು ಮಾಜಿ ಸಂಸದ ರಾಜಾ ಅಮರೇಶ್ವರ ನಾಯಕ ಒತ್ತಾಯಿಸಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿ, 7500 ರಿಂದ 8 ಸಾವಿರ ರೂ.ವರೆಗೆ ಖರೀದಿಸಲಾಗುತ್ತಿದೆ. ಹತ್ತಿ ಖರೀದಿ ಕೇಂದ್ರ ಆರಂಭಿಸಲು ಕೇಂದ್ರ ಕೃಷಿ ಸಚಿವ ಹಾಗೂ ಬೆಂಬಲ ಬೆಲೆ ನಿಗದಿ ಅಧಿಕಾರಿಗಳಿಗೆ ಒತ್ತಾಯಿಸಲಾಗಿದೆ ಎಂದು ತಿಳಿಸಿದರು.
ರಾಯಚೂರು-ಬೆಳಗಾವಿ ಹೆದ್ದಾರಿ ಕಾಮಗಾರಿಗೆ ಸರಿಯಾಗಿ ಭೂ ಸ್ವಾಧೀನ ಪ್ರಕ್ರೀಯೆ ವಿಳಂಬವಾಗುತ್ತಿದೆ. ಲ್ಯಾಂಡ್ ಮಾಫಿಯಾದವರ ಪ್ರವೇಶದಿಂದ ರೈತರಿಂದ ಭೂಮಿ ಖರೀದಿಸಿ ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ. ಈ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಗಮನಕ್ಕೆ ತರಲಾಗಿದೆ ಎಂದರು.
ಜೇವರ್ಗಿ-ಚಾಮರಾಜ ನಗರ ರಾಷ್ಟ್ರೀಯ ಹೆದ್ದಾರಿ 150ಎ ಕಾಮಗಾರಿ ಈಗಾಗಲೇ ಮಸ್ಕಿ ತಾಲೂಕಿನ ಬುದ್ದಿನ್ನಿ ಕ್ರಾಸ್‌ನಿಂದ ಲಿಂಗಸುಗೂರು ತಾಲೂಕಿನ ಹೊನ್ನಳ್ಳಿವರೆಗೆ ಕಾಮಗಾರಿ ಪ್ರಗತಿಯಲ್ಲಿದೆ. ಮುಂದುವರಿದ ಕಾಮಗಾರಿ ತಿಂಥಿಣಿ ಬ್ರಿಡ್ಜ್, ಕೃಷ್ಣಾಪುರ, ಸಗರ ಮೂಲಕ ಜೇವರ್ಗಿವರೆಗಿನ ಕಾಮಗಾರಿ ಆರಂಭಿಸಬೇಕು. ಗದಗ-ವಾಡಿ ರೈಲ್ವೇ ಯೋಜನೆ ಭೂ ಸ್ವಾಧೀನದಡಿ ರೈತರಿಗೆ ಪರಿಹಾರ ಹಣ ನೀಡಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು. ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಶರಣಪ್ಪ ಮೇಟಿ, ಪ್ರಮುಖರಾದ ಗಜೇಂದ್ರ ನಾಯಕ, ಶರಣಯ್ಯ ಗೊರೇಬಾಳ ಇದ್ದರು.