ಆಧುನಿಕ ಭರಾಟೆಯಲ್ಲಿ ಸಂಸ್ಕಾರ ಮರೆ

Untitled design (78)
ಲಿಂಗಸುಗೂರು ಸಮೀಪದ ಯರಡೋಣ ಕ್ರಾಸ್‌ನ ಸಿದ್ಧರಾಮೇಶ್ವರ ಗುರುಮಠದ ಮುರುಘೇಂದ್ರ ಶಿವಯೋಗಿಗಳ 32 ನೇ ಗುರುವಂದನಾ ಕಾರ್ಯಕ್ರಮವನ್ನು ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ ಉದ್ಘಾಟಿಸಿದರು. ಶಾಸಕ ಮಾನಪ್ಪ ವಜ್ಜಲ್, ಮುಖಂಡರಾದ ಭೂಪನಗೌಡ ಪಾಟೀಲ್, ಗಿರಿಮಲ್ಲನಗೌಡ ಪಾಟೀಲ್, ಪಾಮಯ್ಯ ಮುರಾರಿ ಇದ್ದರು.
Published on

ಲಿಂಗಸುಗೂರು: ಸುಸಂಸ್ಕೃತ ಸಮಾಜ ನಿರ್ಮಿಸುವಲ್ಲಿ ಮಠ-ಮಾನ್ಯಗಳ ಮತ್ತು ತಾಯಂದಿರರ ಕೊಡುಗೆ ಅಪಾರವಾಗಿದೆ ಎಂದು ಮಾಜಿ ಸಚಿವ, ಕಾಂಗ್ರೆಸ್‌ನ ಕೊಪ್ಪಳ ಜಿಲ್ಲಾಧ್ಯಕ್ಷ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದರು.

ಪಟ್ಟಣಕ್ಕೆ ಸಮೀಪದ ಯರಡೋಣ ಕ್ರಾಸ್‌ನ ಸಿದ್ಧರಾಮೇಶ್ವರ ಗುರುಮಠದಲ್ಲಿ ಮುರುಘೇಂದ್ರ ಶಿವಯೋಗಿಗಳ 32 ಗುರುವಂದನಾ ಹಾಗೂ ತುಲಾಭಾರ ಕಾರ್ಯಕ್ರಮ ಉದ್ಘಾಟಿಸಿ ಬುಧವಾರ ಮಾತನಾಡಿದರು.

ಇಂದಿನ ಆಧುನಿಕತೆ ಭರಾಟೆಯಲ್ಲಿ ಸಂಸ್ಕಾರ ಮರೆಯಾಗುತ್ತಿದ್ದು, ಪರಸ್ಪರ ಪ್ರೀತಿ, ನಂಬಿಕೆ, ವಿಶ್ವಾಸ ಕಡಿಮೆಯಾಗುತ್ತಿದೆ. ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ ಮಠ-ಮಾನ್ಯಗಳು ಶಿಕ್ಷಣದ ಜತೆಗೆ ದೀಕ್ಷಾ ಸಂಸ್ಕಾರ ನೀಡಿ ಸುಸಂಸ್ಕೃತರನ್ನಾಗಿ ರೂಪಿಸುತ್ತ ಬರುತ್ತಿವೆ. ಸಮಾಜದಲ್ಲಿ ಸಂಸ್ಕಾರ, ಸಂಸ್ಕೃತಿ ಕ್ಷೀಣಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಮಕ್ಕಳನ್ನು ತಿದ್ದಿ ತೀಡಿ ಸಂಸ್ಕಾರವಂತರನ್ನಾಗಿ ಮಾಡುವ ಅತ್ಯಂತ ಜವಾಬ್ದಾರಿ ಶಕ್ತಿ ಸ್ವರೂಪಿಣಿಯರಾದ ತಾಯಂದಿರ ಮೇಲಿದೆ ಎಂದರು.

ಸಿದ್ಧರಾಮೇಶ್ವರ ಗುರುಮಠದ ಮುರುಘೇಂದ್ರ ಶಿವಯೋಗಿಗಳು ಅಯ್ಯಚಾರ, ದೀಕ್ಷಾ ಸಂಸ್ಕಾರ, ಸಂಸ್ಕೃತ ಅಭ್ಯಾಸ ನಡೆಸುತ್ತ ಮುಗಳಕೋಡದ ಲಿಂಗೈಕ್ಯ ಯಲ್ಲಾಲಿಂಗ ಮಹಾರಾಜರು, ಷಡಕ್ಷರಿ ಸಿದ್ಧರಾಮೇಶ್ವರ ಶಿವಯೋಗಿಗಳ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವುದು ಸಂತೋಷದ ವಿಷಯವಾಗಿದೆ ಎಂದು ಹೇಳಿದರು.

ಶಾಸಕ ಮಾನಪ್ಪ ವಜ್ಜಲ್ ಮಾತನಾಡಿ, ಮುರುಘೇಂದ್ರ ಶಿವಯೋಗಿಗಳು ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಸಾವಿರಾರು ಭಕ್ತರ ಪ್ರೀತಿಗೆ ಪಾತ್ರರಾಗಿ ಬೃಹತ್ ಮಠ ನಿರ್ಮಿಸಿ ಮಕ್ಕಳಿಗೆ ದೀಕ್ಷಾ ಸಂಸ್ಕಾರ ಮತ್ತು ನಾನಾ ಧಾರ್ಮಿಕ ಕಾರ್ಯಕ್ರಮ ಆಯೋಜಿಸುತ್ತಾ ಬರುತ್ತಿದ್ದಾರೆ. ನಾಡಿನ ನಾನಾ ಭಾಗಗಳಿಂದ ನೂರಾರು ಭಕ್ತರು ಆಗಮಿಸಿ ಗುರುವಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಕ್ತಿ ಪೂರ್ವಕ ಗುರುವಂದನೆ ಸಲ್ಲಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಹೇಳಿದರು.

ಶ್ರೀಮಠದಲ್ಲಿ ಬೆಳಗ್ಗೆ 6 ಗಂಟೆಗೆ ಗಣಪತಿ ಹಾಗೂ ಚಂಡಿಕಾ ಹೋಮ ಮತ್ತು ಜಂಗಮ ವಟುಗಳಿಗೆ ಅಯ್ಯಚಾರ, ಸಂಸ್ಕಾರ ಶಿಬಿರ ಹಾಗೂ ಸಂಜೆ ಕೋತ್ತಬಾಳ ಕಲಾತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಬಳಿಕ ಗುರುವಂದನಾ ಕಾರ್ಯಕ್ರಮ, ನರಗುಂದದ ಜಗದೀಶ ಈಟಿ ಕುಟುಂಬದಿಂದ ಶ್ರೀಗಳಿಗೆ ತುಲಾಭಾರ ಕಾರ್ಯಕ್ರಮ ನಡೆಯಿತು.
ಬೊಮ್ಮನಾಳ ಗವಿಮಠದ ಗುರುಶಾಂತ ಶಿವಾಚಾರ್ಯರು, ಮುಖಂಡರಾದ ಭೂಪನಗೌಡ ಪಾಟೀಲ್, ಗಿರಿಮಲ್ಲನಗೌಡ ಪಾಟೀಲ್, ಪಾಮಯ್ಯ ಮುರಾರಿ, ಶಿವಶಂಕರ ಬಿರಾದಾರ, ಬಿ.ಆರ್.ಬನ್ಸಡೆ, ಗಂಗಾಧರಯ್ಯ ಬ್ಯಾಳಿಮಠ ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net