

ಲಿಂಗಸುಗೂರು: ತರಕಾರಿ ಮಾರುಕಟ್ಟೆಯಲ್ಲಿನ ಕರ ವಸೂಲಿ ನೀತಿ ವಿರೋಧಿಸಿ ರಾಜ್ಯ ರೈತ ಸಂಘದ (ಕೋಡಿಹಳ್ಳಿ ಬಣ) ಮುಖಂಡರು ಸೋಮವಾರ ನಗರದ ಎಸಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಹಿಂದಿನ ಮುಖ್ಯಾಧಿಕಾರಿ ಮತ್ತು ಎಸಿ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ತೆರಿಗೆ ಸಂಗ್ರಹ ಮಾಡುವಂತಿಲ್ಲ ಮತ್ತು ಮಧ್ಯರಾತ್ರಿ 1 ಗಂಟೆಗೆ ವ್ಯಾಪಾರ ವಹಿವಾಟು ಮಾಡಬಾರದೆಂದು ತೀರ್ಮಾನ ಕೈಗೊಳ್ಳಲಾಗಿತ್ತು. ಇದರಿಂದ ತೆರಿಗೆ ಸಂಗ್ರಹಿಸುವುದನ್ನು ನಿಲ್ಲಿಸಲಾಗಿತ್ತು. ಆದರೆ ಈಗ ಏಕಾಏಕಿ ರೈತರಿಗೆ ಗುಂಡಾವರ್ತನೆ ತೋರಿ ತೆರಿಗೆ ವಸೂಲಿ ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾರುಕಟ್ಟೆಯಲ್ಲಿ ರೈತರಿಗೆ ಕುಡಿವ ನೀರು ಮತ್ತು ನೆರಳಿನ ವ್ಯವಸ್ಥೆ ಮಾಡಬೇಕು. ಮಹಿಳಾ ಮತ್ತು ಪುರುಷರಿಗೆ ಪ್ರತ್ಯೇಕ ಶೌಚಗೃಹ ನಿರ್ಮಾಣ ಮಾಡಬೇಕು. ಸರ್ಕಾರದ ಆದೇಶವಿಲ್ಲದೆ ಪುರಸಭೆ ಸದಸ್ಯರ ಕುಮ್ಮಕ್ಕಿನಿಂದ ತೆರಿಗೆ ಸಂಗ್ರಹ ನಿಲ್ಲಿಸಬೇಕು. ಫೆ.25 ರಂದು ಸಂಗ್ರಹಿಸಿದ ತೆರಿಗೆ ಮರಳಿ ರೈತರಿಗೆ ಹಂಚಿಕೆ ಮಾಡಬೇಕು. ಮಧ್ಯರಾತ್ರಿ 1ಗಂಟೆಯ ವ್ಯಾಪಾರ ವಹಿವಾಟನ್ನು ಬೆಳಗ್ಗೆ 5 ಗಂಟೆಗೆ ಮಾಡಬೇಕೆಂದು ಒತ್ತಾಯಿಸಿ ರೈತರು ಎಸಿ ಅವಿನಾಶ ಶಿಂಧೆಗೆ ಮನವಿ ಸಲ್ಲಿಸಿದರು.
ಸಂಘದ ತಾಲೂಕು ಅಧ್ಯಕ್ಷ ಶಿವಪುತ್ರಗೌಡ ಜಾಗೀರ ನಂದಿಹಾಳ, ಪ್ರಮುಖರಾದ ಸದಾನಂದ, ಸಂಗನಗೌಡ ಹೊಸೂರು, ನಾಗಮ್ಮ ಜೂಲಗುಡ್ಡ, ಲಕ್ಷ್ಮಣ, ರಮೇಶ ಮೂಲಿಮನಿ, ಬಸಪ್ಪ ಭೂಪುರ, ಪ್ರಸಾದರಡ್ಡಿ, ಬಸಪ್ಪ, ಹನುಮನಗೌಡ, ಬಾಷಾಸಾಬ್, ಖಾಜಾವಲಿ ಇತರರು ಇದ್ದರು.