

ಲಿಂಗಸುಗೂರು: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇವಿಎಂ ಮತಯಂತ್ರಗಳ ನೀಡಿ ಕಾರ್ಯಕ್ಷಮತೆ ಬಗ್ಗೆ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಶನಿವಾರ ಪರಿಶೀಲನೆ ನಡೆಸಿದರು.
ಲೋಕಸಭಾ ಚುನಾವಣೆ ಯಶಸ್ಸಿಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕ್ಷೇತ್ರದ ಅಭ್ಯರ್ಥಿಗಳ ಅಂತಿಮಗೊಂಡ ಬಳಿಕ ಅನುಕ್ರಮವಾಗಿ ಅವರ ಹೆಸರು, ಚಿನ್ಹೆ ಆಯಾ ಕ್ಷೇತ್ರಗಳ ಮಟ್ಟದಲ್ಲಿ ಇವಿಎಂ ಮತಯಂತ್ರಗಳಿಗೆ ಸೇರ್ಪಡೆಗೊಳಿಸಲಾಗುವುದು. ಲಿಂಗಸುಗೂರು ಕ್ಷೇತ್ರದ 285 ಮತಗಟ್ಟೆಗಳ ಮತಯಂತ್ರಗಳ ಸಮರ್ಪಕ ಕಾರ್ಯನಿರ್ವಹಣೆ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಡಿಸಿ ತಿಳಿಸಿದರು.
ಈಗಾಗಲೇ ರಾಯಚೂರು, ಮಾನ್ವಿ, ಸಿಂಧನೂರು, ಮಸ್ಕಿ ಕ್ಷೇತ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಇದೀಗ ಲಿಂಗಸುಗೂರು ಬಳಿಕ ದೇವದುರ್ಗಕ್ಕೆ ಭೇಟಿ ನೀಡಲಾಗುವುದು. ಜಿಲ್ಲೆಯ ಪ್ರತಿಯೊಂದು ಮತಗಟ್ಟೆ ಕೇಂದ್ರಗಳಲ್ಲಿ ಸುಗಮ ಮತದಾನಕ್ಕೆ ಸಣ್ಣಪುಟ್ಟ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ. ಪ್ರತಿ ಮತಗಟ್ಟೆ ಕೇಂದ್ರದಲ್ಲಿ ಕುಡಿಯುವ ನೀರು, ವಿದ್ಯುತ್, ಬೆಳಕು ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲಾಗುವುದು ಎಂದರು. ಎಸಿ ಅವಿನಾಶ ಶಿಂಧೆ, ತಹಸೀಲ್ದಾರ್ ಡಾ.ಮಲ್ಲಪ್ಪ ಯರಗೋಳ ಸೇರಿ ಇತರರಿದ್ದರು.