ಜನರ ಏಳಿಗೆಗಾಗಿ ಧರ್ಮಸ್ಥಳ ಸಂಸ್ಥೆ ನೆರವು

Untitled design (7)
ಲಿಂಗಸುಗೂರಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಯೋಜನಾ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸ್ಥೆಯ ಜಿಲ್ಲಾ ಯೋಜನಾಧಿಕಾರಿ ಮೋಹನ ನಾಯಕ, ಶರಣಪ್ಪ ಸಜ್ಜನ್, ಎಂ.ಡಿ.ರಫಿ, ಶಶಿಕಲಾ ಭೋವಿ, ತೋಟಮ್ಮ ಸೇರಿ ಸಿಬ್ಬಂದಿ ಇದ್ದರು.
Published on

ಲಿಂಗಸುಗೂರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ತಾಲೂಕಿನಲ್ಲಿ ಕಳೆದ ಹನ್ನೊಂದು ವರ್ಷಗಳಿಂದ ಸಮಾಜಮುಖಿ ಕಾರ್ಯ ಮಾಡುತ್ತಿದೆ. ರೈತರು, ಆರ್ಥಿಕವಾಗಿ ಹಿಂದುಳಿದ ಮತ್ತು ದುರ್ಬಲ ವರ್ಗದ ಜನರ ಏಳಿಗೆಗಾಗಿ ಅನೇಕ ಕಾರ್ಯಕ್ರಮಗಳ ರೂಪಿಸಿದೆ ಎಂದು ಸಂಸ್ಥೆಯ ಪ್ರಾದೇಶಿಕ ಯೋಜನಾಧಿಕಾರಿ ಚಂದ್ರಶೇಖರ ಹೇಳಿದರು.

ಪಟ್ಟಣದಲ್ಲಿ ಸಂಸ್ಥೆಯ ಯೋಜನಾ ಕಚೇರಿಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು. ತಾಲೂಕಿನಲ್ಲಿ 23 ಕಾಯಂ ಸಿಬ್ಬಂದಿ, 57 ಸೇವಾ ಪ್ರತಿನಿಧಿಗಳು, 35 ಜನ ಸಿಎಸ್‌ಸಿ ಸೇವಾದಾರರು ಕಾರ್ಯನಿರ್ವಹಿಸುತ್ತಿದ್ದಾರೆ. 20,406 ಸದಸ್ಯರನ್ನು ಒಳಗೊಂಡ 2,477 ಕ್ರೀಯಾಶೀಲ ಸಂಘಗಳು ಕಾರ್ಯನಿರ್ವಹಿಸುತ್ತಿವೆ. 2035 ರೈತಾಪಿ ಕುಟುಂಬಗಳು ರೂ.20 ಕೋಟಿ ಮೊತ್ತದ ಪ್ರಗತಿನಿಧಿ ಪಡೆದು ಕೃಷಿ ಅಭಿವೃದ್ಧಿ ಕೈಗೊಂಡಿದ್ದಾರೆ. 1045 ಕುಟುಂಬಗಳು ರೂ. 8 ಕೋಟಿ ಮೊತ್ತದ ಪ್ರಗತಿನಿಧಿ ಪಡೆದು ಹೈನುಗಾರಿಕೆ, ಆಕಳು, ಮೇಕೆ, ಕುರಿ ಸಾಕಾಣಿಕೆ ಮತ್ತು ಕೊಟ್ಟಿಗೆ ರಚಿಸಿಕೊಂಡಿದ್ದಾರೆ ಎಂದು ತಿಳಿಸಿದರು.

6755 ಕುಟುಂಬಳು ಪ್ರಗತಿನಿಧಿ ಪಡೆದು ಅಧ್ಯಯನ, ಪ್ರವಾಸ, ಕೌಶಲಾಭಿವೃದ್ಧಿ ತರಬೇತಿ, ಸ್ವಯಂ ಉದ್ಯೋಗ ಮಾಹಿತಿ, ಟೈಲರಿಂಗ್, ಬ್ಯೂಟಿ ಪಾರ್ಲರ್, ಕರಕುಶಲ ವಸ್ತುಗಳ ತಯಾರಿಕೆ ಘಟಕ ಪ್ರಾರಂಭಿಸಿ ಆರ್ಥಿಕ ಗುಣಮಟ್ಟ ಹೆಚ್ಚಿಸಿಕೊಂಡಿದ್ದಾರೆ. ಇದರ ಜತೆಗೆ ಸಂಸ್ಥೆಯು ಮೂಲ ಸೌಕರ್ಯ, ಶಿಕ್ಷಣ, ಹಸಿರು ಇಂಧನ, ಪ್ರಗತಿನಿಧಿ ವಿತರಣೆ, ವಿಮಾ ಯೋಜನೆ, ಮಹಿಳಾ ಜ್ಞಾನ ವಿಕಾಸ, ವಾತ್ಸಲ್ಯ, ಪರಿಸರ, ಸಿಎಸ್‌ಸಿ, ಸಮುದಾಯ ಅಭಿವೃದ್ಧಿ, ಸುಜ್ಞಾನನಿಧಿ ಶಿಷ್ಯವೇತನ, ಶಾಲೆಗಳಿಗೆ ಪೀಠೋಪಕರಣ ವಿತರಣೆ, ಶಾಲಾ ಕಟ್ಟಡ, ಸಮುದಾಯ ಭವನ, ದೇವಸ್ಥಾನ ಜೀರ್ಣೋದ್ಧಾರ, ಮದ್ಯ ವರ್ಜನ ಶಿಬಿರ, ಹಿಂದು ರುದ್ರಭೂಮಿ ಅಭಿವೃದ್ಧಿ, ಕೆರೆಗಳ ಹೂಳೆತ್ತುವುದು, ಶ್ರದ್ಧಾ ಕೇಂದ್ರ ಸ್ವಚ್ಛತೆ, ಮಾಸಾಶನ ಸೇರಿ ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತ ಬರಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸಂಸ್ಥೆಯ ಜಿಲ್ಲಾ ಯೋಜನಾಧಿಕಾರಿ ಮೋಹನ ನಾಯಕ, ಶರಣಪ್ಪ ಸಜ್ಜನ್, ಎಂ.ಡಿ.ರಫಿ, ಶಶಿಕಲಾ ಭೋವಿ, ತೋಟಮ್ಮ ಸೇರಿ ಸಿಬ್ಬಂದಿ ವರ್ಗ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net